ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಮಾಂಜಾ ದಾರದಿಂದ ಸಂಭವಿಸುತ್ತಿರುವ ಅವಘಡಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಾಂಜಾ ದಾರದಿಂದ ಮಹಿಳೆಯೊಬ್ಬರು ಮೃತಪಟ್ಟ ಬೆನ್ನಲ್ಲೇ ಮಾರಾಟಗಾರರು ಹಾಗೂ ಬಳಕೆದಾರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಅವಳಿ ನಗರ ವ್ಯಾಪ್ತಿಯಲ್ಲಿ ಒಟ್ಟು 12 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಜಾ ದಾರದ ಅಪಾಯದ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ದುರ್ಘಟನೆಗಳು ಮುಂದುವರಿದಿವೆ. ನಿನ್ನೆ ಮಾಂಜಾ ದಾರದಿಂದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಹೀಗಾಗಿ ಮಾಂಜಾ ದಾರ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಮಾಂಜಾ ದಾರ ಮಾರಾಟಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ವಿವಿಧೆಡೆ ದಾಳಿ ನಡೆಸಲಾಗಿದೆ. ಬಿಎನ್ಎಸ್ನ ಸೆಕ್ಷನ್ 120(ಬಿ) ಅಡಿಯಲ್ಲಿ ಒಟ್ಟು 12 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಇನ್ನು ನಗರದಲ್ಲಿ ವಿದ್ಯುತ್ ಕಂಬಗಳು, ಮರಗಳು ಹಾಗೂ ಇತರ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ಮಾಂಜಾ ದಾರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೂ ಪತ್ರ ಬರೆಯಲಾಗಿದೆ. ಪಾಲಿಕೆ ಹಾಗೂ ಹೆಸ್ಕಾಂ ಸಹಕಾರದೊಂದಿಗೆ ಅಪಾಯಕಾರಿ ದಾರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಹಿಳೆ ಮೃತಪಟ್ಟ ಘಟನೆಯ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿ ಯಾರೂ ಗಾಳಿಪಟ ಹಾರಿಸುತ್ತಿರಲಿಲ್ಲ. ಆದರೆ, ಮರದಲ್ಲಿ ಮೂರು ಅಥವಾ ನಾಲ್ಕು ಗಾಳಿಪಟಗಳು ಸಿಲುಕಿಕೊಂಡಿದ್ದವು. ಅವುಗಳಲ್ಲಿ ಒಂದಕ್ಕೆ ಅಂಟಿಕೊಂಡಿದ್ದ ದಾರ ಗಾಳಿಯ ರಭಸಕ್ಕೆ ರಸ್ತೆ ಮೇಲೆ ಬಂದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ವಿವರಿಸಿದ್ದಾರೆ.
ಇದೇ ವೇಳೆ ಹುಬ್ಬಳ್ಳಿಯಲ್ಲಿ ಮಾಂಜಾ ದಾರದಿಂದ ಮತ್ತೊಂದು ಅವಘಡ ಸಂಭವಿಸಿದೆ. ನಿನ್ನೆ ಸಂಜೆ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೂಗಿಗೆ ಮಾಂಜಾ ದಾರ ತಗುಲಿ ಗಂಭೀರ ಗಾಯವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಂಜಾ ದಾರ ಮಾರಾಟ ಹಾಗೂ ಬಳಕೆಯನ್ನು ತಡೆಯಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಜಾ ದಾರ ಬಳಕೆ ಅಥವಾ ಮಾರಾಟ ನಡೆಯುತ್ತಿರುವುದು ಕಂಡುಬಂದರೆ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಭೂಷಣ ಬೋರಸೆ ಮನವಿ ಮಾಡಿದ್ದಾರೆ.
ಮಾಂಜಾ ದಾರದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ಹಿನ್ನೆಲೆಯಲ್ಲಿ ಮಾರಾಟಗಾರರು ಹಾಗೂ ಬಳಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.










