ಬಾಗಲಕೋಟೆ: ಜಿಲ್ಲೆಯ ಮುಧೋಳ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ದೈಹಿಕ ಶಿಕ್ಷಕರೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರನ್ನು ಜಮಖಂಡಿ ಭಾಗದ ಆರ್ಎಸ್ಎಸ್ ದೈಹಿಕ ಶಿಕ್ಷಕ ಪ್ರಮೋದ್ ಮಮದಾಪುರ (44) ಎಂದು ಗುರುತಿಸಲಾಗಿದೆ. ನವರಾತ್ರಿ ಆರಂಭದಲ್ಲಿ ಅನುಷ್ಠಾನಕ್ಕೆ ಕುಳಿತುಕೊಳ್ಳುವುದಾಗಿ ತಿಳಿಸಿ ನಾಪತ್ತೆಯಾಗಿದ್ದ ಅವರು ಇದೀಗ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಮೋದ್ ಮಮದಾಪುರ ಅವರು ಜಮಖಂಡಿ ಭಾಗದಲ್ಲಿ ಆರ್ಎಸ್ಎಸ್ ಕಾರ್ಯಕರ್ತರಿಗೆ ದೈಹಿಕ ಶಿಕ್ಷಣ ತರಬೇತಿ ನೀಡುತ್ತಿದ್ದರು. ದಂಡ ಪ್ರಹಾರ, ಕರಾಟೆ ಸೇರಿದಂತೆ ವಿವಿಧ ದೈಹಿಕ ಚಟುವಟಿಕೆಗಳಲ್ಲಿ ತರಬೇತಿ ನೀಡುತ್ತಿದ್ದ ಅವರು, ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ನವರಾತ್ರಿ ಆರಂಭದ ಸಂದರ್ಭದಲ್ಲಿ ಅನುಷ್ಠಾನಕ್ಕೆ ಕುಳಿತುಕೊಳ್ಳುವುದಾಗಿ ಹೇಳಿದ್ದ ಪ್ರಮೋದ್, ಈ ಅವಧಿಯಲ್ಲಿ ಯಾರೂ ತಮಗೆ ಕರೆ ಮಾಡಬಾರದು ಎಂದು ತಿಳಿಸಿದ್ದರು ಎನ್ನಲಾಗಿದೆ. ಬಳಿಕ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು. ಇದೀಗ ಮುಧೋಳ ನಗರದ ಕೆರೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮುಧೋಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಮೋದ್ ಅವರ ಸಾವಿಗೆ ನಿಖರ ಕಾರಣವೇನು? ಅವರು ಕೆರೆಗೆ ಬಿದ್ದಿದ್ದಾರೆಯೇ ಅಥವಾ ಸಾವಿನ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.









