ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿ ಗ್ರಾಮದ ಬಳಿ ಎರಡು ದೈತ್ಯ ಕಾಡಾನೆಗಳು ಕಾಳಗಕ್ಕಿಳಿದಿವೆ.
ಗುಂಪಿನಿಂದ ಹೊರಬಂದಿರುವ ಎರಡು ಮದಗಜಗಳು ಪರಸ್ಪರ ಕಾದಾಟ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಾಡಾನೆಗಳ ಕಾಳಗವನ್ನು ನಿಯಂತ್ರಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಆನೆಗಳ ಕಾದಾಟದ ಮಧ್ಯೆ ಶ್ವಾನವೊಂದು ಪ್ರವೇಶಿಸಿದ್ದು, ಬೊಗಳುತ್ತಾ ಆನೆಗಳ ಸುತ್ತ ಓಡಾಡಿದೆ. ಇದರಿಂದ ಆನೆಗಳು ಕಾದಾಟ ನಿಲ್ಲಿಸಿ ಶ್ವಾನದತ್ತ ತಿರುಗಿವೆ. ಬಳಿಕ ಶ್ವಾನದ ಮೇಲೆ ದಾಳಿ ಮಾಡಲು ಮುಂದಾಗಿವೆ.
ಶ್ವಾನ ಮಧ್ಯೆ ಪ್ರವೇಶಿಸಿದ ಬಳಿಕ ಆನೆಗಳ ಕಾದಾಟ ಸ್ಥಗಿತಗೊಂಡಿದೆ. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ. ಆದರೆ ಮದದಲ್ಲಿರುವ ಕಾಡಾನೆಗಳಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.










