ಬೀದರ್: ಕಟಾವಿಗೆ ಬಂದ ಕಬ್ಬಿನ ಬೆಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗಾಹುತಿಯಾಗುತ್ತಿದ್ದು, ಬೀದರ್ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ 20 ದಿನಗಳಲ್ಲಿ 26 ರೈತರಿಗೆ ಸೇರಿದ 100ಕ್ಕೂ ಹೆಚ್ಚು ಎಕರೆ ಪ್ರದೇಶದ ಕಬ್ಬು ಸುಟ್ಟು ಕರಕಲಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಜೋತು ಬಿದ್ದ ವಿದ್ಯುತ್ ತಂತಿಗಳೇ ಬೆಂಕಿಗೆ ಕಾರಣ?
ಹೊಲಗಳ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಜೋತು ಬಿದ್ದಿವೆ. ಗಾಳಿಗೆ ತಂತಿಗಳು ಪರಸ್ಪರ ತಗುಲುವುದು ಅಥವಾ ಕಬ್ಬಿನ ಬೆಳೆಗೆ ತಾಗುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಕ್ಷಣಾರ್ಧದಲ್ಲಿ ಹೊಲಕ್ಕೆ ವ್ಯಾಪಿಸುವ ಬೆಂಕಿಯಿಂದ ಕಟಾವಿಗೆ ಸಿದ್ಧವಾಗಿದ್ದ ಕಬ್ಬು ಸುಟ್ಟು ಭಸ್ಮವಾಗುತ್ತಿದೆ.
ಕಬ್ಬು ಬೆಳೆಯಲು ಮಾಡಿದ ಸಾಲ ತೀರಿಸುವ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಂಕಿ ಅವಘಡಗಳು ದೊಡ್ಡ ಹೊಡೆತ ನೀಡಿವೆ. ಕಳೆದ ವರ್ಷವೂ ವಿದ್ಯುತ್ ಅವಘಡಗಳಿಂದ ಸುಮಾರು 225 ಎಕರೆ ಪ್ರದೇಶದ ಕಬ್ಬು ನಾಶವಾಗಿತ್ತು. ಆದರೂ ವಿದ್ಯುತ್ ತಂತಿಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳದಿರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಹಾರ ನೀಡಲು ಜೆಸ್ಕಾಂ ನಿರ್ಲಕ್ಷ್ಯ ಆರೋಪ:
ವಿದ್ಯುತ್ ಅವಘಡದಿಂದ ಬೆಳೆ ನಾಶವಾದರೂ ಜೆಸ್ಕಾಂ ಇಲಾಖೆಯಿಂದ ಸೂಕ್ತ ಪರಿಹಾರ ದೊರೆಯುತ್ತಿಲ್ಲ ಎಂಬುದು ರೈತರ ಆರೋಪ. ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವುದರ ಜೊತೆಗೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ವಿಠ್ಠಲ್ ರೆಡ್ಡಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಪದೇಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂಬ ಆಕ್ರೋಶ ರೈತರಲ್ಲಿದೆ. ಇನ್ನಾದರೂ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯುತ್ ತಂತಿಗಳ ದುರಸ್ತಿ ಕೈಗೊಂಡು, ರೈತರ ಬೆಳೆಗಳಿಗೆ ರಕ್ಷಣೆ ನೀಡಬೇಕಿದೆ.










