ಚೆನ್ನೈ: ಖಾಸಗಿ ಶಾಲೆಗಳಿಗೆ ಅನುಮತಿ ಮತ್ತು ಮಾನ್ಯತೆ ಕೊಡಿಸುವ ಹೆಸರಿನಲ್ಲಿ ಆರ್ಥಿಕ ಅಕ್ರಮ ಎಸಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಾಮೊಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ, ಸೋಮವಾರ ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಂದ ‘ಪಾರ್ಟಿ ಫಂಡ್’ ಹೆಸರಿನಲ್ಲಿ ₹100 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂಬುದು ಪ್ರಕರಣದ ಪ್ರಮುಖ ಆರೋಪವಾಗಿದೆ. ಶಾಲೆಗಳ ಮಾನ್ಯತೆ ನವೀಕರಣ, ಮೇಲ್ದರ್ಜೆಗೇರಿಸುವಿಕೆ ಹಾಗೂ ಇತರ ಅನುಮೋದನೆಗಳನ್ನು ಶೀಘ್ರವಾಗಿ ಕೊಡಿಸುವ ಭರವಸೆ ನೀಡಿ ಹಣ ಪಡೆಯಲಾಗಿದೆ ಎಂದು ದೂರಲಾಗಿದೆ.
ತನಿಖೆಯ ವೇಳೆ ಸುಮಾರು 177 ಖಾಸಗಿ ಶಾಲೆಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಈ ಹಣ ಸಂಗ್ರಹಣೆಯಲ್ಲಿ ಮಾಜಿ ಸಚಿವರು ಭಾಗಿಯಾಗಿದ್ದರು ಎಂಬ ಆರೋಪದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನೂ ನಡೆಸಲಾಗಿದೆ.
ಅಕ್ಟೋಬರ್ 26ರಂದು ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರು ಅನ್ಬಿಲ್ ಮಹೇಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು. ಇದರ ಬೆನ್ನಲ್ಲೇ ಬಂಧನ ನಡೆದಿದೆ.










