ಚಿಕ್ಕಮಗಳೂರು: ಮದುವೆಯಾಗಿ ಇನ್ನೂ ಐದು ದಿನಗಳಷ್ಟೇ ಕಳೆದಿತ್ತು. ಹೊಸ ಬದುಕಿನ ಕನಸುಗಳೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದ ಯುವಕನಿಗೆ ವಿಧಿ ಘೋರ ಆಘಾತ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ನವವಿವಾಹಿತ ಯುವಕ ಸಾವನ್ನಪ್ಪಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಹೊತ್ತಿ ಉರಿದಿದ್ದು, ಯುವಕನ ದೇಹವೂ ಸುಟ್ಟು ಕರಕಲಾಗಿದೆ. ಈ ದುರಂತದಿಂದ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಹೌದು, ಮದುವೆಯಾಗಿ ಕೇವಲ ಐದು ದಿನಗಳಲ್ಲೇ ಯುವಕನೊಬ್ಬ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಶೃಂಗೇರಿ ತಾಲೂಕಿನ ಮೆಣಸೆ ಬಳಿ ನಡೆದಿದೆ. ಮೃತ ದುರ್ದೈವಿಯನ್ನು ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದ ನಿವಾಸಿ ನಾಗರಾಜ್ (32) ಎಂದು ಗುರುತಿಸಲಾಗಿದೆ.
ಅಷ್ಟಕ್ಕೂ ನಡೆದಿದ್ದೇನು ಅಂದ್ರೆ, ಜಯಪುರದಿಂದ ಶೃಂಗೇರಿ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ತೆರಳುತ್ತಿತ್ತು. ಇದೇ ವೇಳೆ ಮೆಣಸೆ ಸಮೀಪ ಬಸ್ ಹಾಗೂ ನಾಗರಾಜ್ ಚಲಾಯಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೈಕ್ ಹೊತ್ತಿ ಉರಿದಿದೆ.
ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಬೆಂಕಿಯ ಕೆನ್ನಾಲಿಗೆಗೆ ಬೈಕ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಬೈಕ್ ಸವಾರ ನಾಗರಾಜ್ ಅವರ ದೇಹವೂ ಭಾಗಶಃ ಸುಟ್ಟು ಕರಕಲಾಗಿದೆ. ಈ ಭೀಕರ ಅಪಘಾತದಲ್ಲಿ ನಾಗರಾಜ್ ಮೃತಪಟ್ಟಿದ್ದಾರೆ.
ಇನ್ನು ಅಪಘಾತದ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್ ಕೂಡ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಇಳಿದಿದೆ. ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಈ ಭೀಕರ ಡಿಕ್ಕಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆದರೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆಯೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈ ದುರಂತದ ಅತ್ಯಂತ ನೋವಿನ ಸಂಗತಿ ಏನಂದ್ರೆ, ನಾಗರಾಜ್ ಅವರಿಗೆ ಕೇವಲ ಐದು ದಿನಗಳ ಹಿಂದಷ್ಟೇ ಮದುವೆಯಾಗಿತ್ತು. ಹೊಸ ಜೀವನ ಆರಂಭಿಸಿದ್ದ ನಾಗರಾಜ್, ಪತ್ನಿಯೊಂದಿಗೆ ಸುಂದರ ಭವಿಷ್ಯದ ಕನಸು ಕಂಡಿದ್ದರು. ಆದರೆ ಮದುವೆಯ ಸಂಭ್ರಮ ಮಾಸುವ ಮುನ್ನವೇ ಸಂಭವಿಸಿದ ರಸ್ತೆ ಅಪಘಾತ ಅವರ ಬದುಕಿಗೆ ಅಂತ್ಯ ಹಾಡಿದೆ.
ನಾಗರಾಜ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪತ್ನಿ ಹಾಗೂ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಮದುವೆಯ ಸಂಭ್ರಮದಿಂದ ತುಂಬಿದ್ದ ಮನೆಯಲ್ಲಿ ಇದೀಗ ದುಃಖ ಆವರಿಸಿದೆ. ನವವಿವಾಹಿತನ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಇನ್ನೊಂದೆಡೆ ಅಪಘಾತದ ಮಾಹಿತಿ ತಿಳಿದ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣವಾಯಿತೇ ಅಥವಾ ಬೇರೆ ಕಾರಣವಿದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.









