ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಯುನೆಸ್ಕೋ ತಜ್ಞರ ತಂಡ ಹಂಪಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿರುವ ಪ್ರಮುಖ ಸ್ಮಾರಕಗಳನ್ನು ವೀಕ್ಷಿಸಿದ ತಂಡವು, ಹಂಪಿಯ ಪಾರಂಪರಿಕ ಮಹತ್ವ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದೆ.
ಹಂಪಿಗೆ ಭೇಟಿ ನೀಡಿದ ಯುನೆಸ್ಕೋ ತಜ್ಞರ ತಂಡವು ಪ್ರಸಿದ್ಧ ಕಲ್ಲಿನ ರಥ ಹಾಗೂ ವಿಜಯ ವಿಠ್ಠಲ ದೇವಾಲಯದ ಸಂಗೀತ ಮಂಟಪವನ್ನು ವೀಕ್ಷಿಸಿತು. ಸಪ್ತಸ್ವರಗಳನ್ನು ಹೊರಹೊಮ್ಮಿಸುವ ಸಂಗೀತ ಮಂಟಪದ ವಾಸ್ತುಶಿಲ್ಪವನ್ನು ಪರಿಶೀಲಿಸಿದ ತಜ್ಞರು, ಅಲ್ಲಿನ ಸಂಗೀತದ ಸ್ವರಗಳನ್ನು ಆಲಿಸಿದರು. ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳು ವಿಜಯನಗರ ಸಾಮ್ರಾಜ್ಯದ ಇತಿಹಾಸ, ಹಂಪಿಯ ಸಾಂಸ್ಕೃತಿಕ ಪರಂಪರೆ ಹಾಗೂ ಐತಿಹಾಸಿಕ ಸ್ಮಾರಕಗಳ ವಿಶೇಷತೆಗಳನ್ನು ತಂಡದ ಸದಸ್ಯರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಹಂಪಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳ ಕಲ್ಪನೆ ಹಾಗೂ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕುರಿತು ಅಧಿಕಾರಿಗಳು ತಜ್ಞರೊಂದಿಗೆ ಚರ್ಚಿಸಿದರು.
ಯುನೆಸ್ಕೋ ತಂಡದ ಭೇಟಿಯ ಅಂಗವಾಗಿ ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾಡಳಿತಗಳ ವತಿಯಿಂದ ಹೊಸಪೇಟೆಯಲ್ಲಿ ಮಹತ್ವದ ಪಾಲುದಾರರ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಪ್ರವಾಸೋದ್ಯಮ, ಸಂಸ್ಕೃತಿ ಸೇರಿದಂತೆ 22ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿ ಹಂಪಿಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು.
ಹಂಪಿಯ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸುವುದರ ಜತೆಗೆ ಸುಸ್ಥಿರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಪ್ರವಾಸೋದ್ಯಮ ಹಾಗೂ ಫಾರ್ಮ್ಸ್ಟೇಗಳಿಗೆ ಉತ್ತೇಜನ ನೀಡಬೇಕು. ಹಂಪಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಸಾರಿಗೆ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರತಿನಿಧಿಗಳು ಒತ್ತಾಯಿಸಿದರು.
ಇದೇ ವೇಳೆ ಹಂಪಿ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಹಲವು ಮಹತ್ವದ ಪ್ರಸ್ತಾವನೆಗಳನ್ನು ಸಲ್ಲಿಸಲಾಯಿತು. ಅಂಜನಾದ್ರಿ ಬೆಟ್ಟದಲ್ಲಿ ರೋಪ್ವೇ ನಿರ್ಮಾಣ, ಪ್ರವಾಸಿಗರಿಗೆ ತುರ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವುದು, ಕಮಲಾಪುರ ಕೆರೆಯನ್ನು ಪುನರುಜ್ಜೀವನಗೊಳಿಸುವುದು ಹಾಗೂ ಆಸ್ಪತ್ರೆ ಮತ್ತು ಸ್ವಚ್ಛತಾ ವ್ಯವಸ್ಥೆಯನ್ನು ಸುಧಾರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ‘ಹಂಪಿ ಬೈ ನೈಟ್’ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾವನೆಯೂ ಸಭೆಯಲ್ಲಿ ವ್ಯಕ್ತವಾಯಿತು. ಹಂಪಿಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಜತೆಗೆ ಐತಿಹಾಸಿಕ ಸ್ಮಾರಕಗಳ ಮೂಲಸ್ವರೂಪ ಹಾಗೂ ಪಾರಂಪರಿಕ ಮಹತ್ವಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಸಲಹೆ ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ಯುನೆಸ್ಕೋಗೆ ಸಲಹೆ ನೀಡುವ ಪಾರಂಪರಿಕ ತಾಣಗಳ ಸಂರಕ್ಷಣಾ ಸಂಸ್ಥೆಯಾದ ಐಕೋಮೋಸ್ (ICOMOS) ತಜ್ಞರು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಪಾರಂಪರಿಕ ತಾಣಗಳ ರಕ್ಷಣೆಯ ಪ್ರಕ್ರಿಯೆಯಿಂದ ಸ್ಥಳೀಯ ಜನರನ್ನು ದೂರವಿಟ್ಟರೆ ಜೀವಂತ ಪರಂಪರೆಯು ತನ್ನ ಮಹತ್ವವನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು.
ಹಂಪಿಯ ಸ್ಮಾರಕಗಳ ಸಂರಕ್ಷಣೆಯ ಜತೆಗೆ ಸ್ಥಳೀಯ ಜನರ ಜೀವನೋಪಾಯ, ಉದ್ಯೋಗಾವಕಾಶಗಳು ಹಾಗೂ ಆರ್ಥಿಕ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡಬೇಕು. ಪ್ರವಾಸೋದ್ಯಮದಿಂದ ಸ್ಥಳೀಯ ಸಮುದಾಯಕ್ಕೂ ಪ್ರಯೋಜನವಾಗುವಂತೆ ಯೋಜನೆಗಳನ್ನು ರೂಪಿಸಬೇಕು ಎಂಬ ಸಲಹೆಯನ್ನು ತಜ್ಞರು ನೀಡಿದರು.
ಸಭೆಯಲ್ಲಿ ವ್ಯಕ್ತವಾದ ಸಲಹೆಗಳಿಗೆ ಪ್ರತಿಕ್ರಿಯಿಸಿದ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಹಂಪಿಯ ಸಮಗ್ರ ಅಭಿವೃದ್ಧಿ ಹಾಗೂ ಪಾರಂಪರಿಕ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರತಿನಿಧಿಗಳು ನೀಡಿರುವ ಪ್ರಮುಖ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು. ಈ ಎಲ್ಲ ಅಂಶಗಳನ್ನು ಹಂಪಿಯ ನೂತನ ಸಮಗ್ರ ನಿರ್ವಹಣಾ ಯೋಜನೆಯಲ್ಲಿ (Integrated Management Plan) ಅಳವಡಿಸುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.










