ನೆಲಮಂಗಲ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಬಳಸಬೇಕಾದ ವ್ಹೀಲ್ ಚೇರ್ ಅನ್ನು ಕಸ ಸಾಗಿಸಲು ಬಳಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಆಸ್ಪತ್ರೆಯ ಹೊರಭಾಗದಲ್ಲಿ ಕಳೆ ಕಿತ್ತ ಬಳಿಕ ಸಂಗ್ರಹವಾದ ಕಸವನ್ನು ಸಿಬ್ಬಂದಿ ವ್ಹೀಲ್ ಚೇರ್ನಲ್ಲಿ ಸಾಗಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ರೋಗಿಗಳನ್ನು ಕರೆದೊಯ್ಯಲು ಬಳಸಬೇಕಾದ ಚೇರ್ ಅನ್ನು ಕಸ ಸಾಗಿಸಲು ಬಳಸಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕೆ ಆದ್ಯತೆ ನೀಡಬೇಕಾದ ಸಿಬ್ಬಂದಿ, ವ್ಹೀಲ್ ಚೇರ್ ಅನ್ನು ಈ ರೀತಿ ಬಳಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.








