ಬೆಂಗಳೂರು: ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳ ಮತದಾರರ ಪಟ್ಟಿಯಲ್ಲಿ ವಿದೇಶಿ ಪ್ರಜೆಗಳ ಹೆಸರುಗಳು ಪತ್ತೆಯಾಗಿದ್ದು, ಬರೋಬ್ಬರಿ 716 ವಿದೇಶಿ ಪ್ರಜೆಗಳ ಹೆಸರುಗಳನ್ನು ಭಾರತೀಯ ಚುನಾವಣಾ ಆಯೋಗ ತೆಗೆದುಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದರಲ್ಲೂ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲೇ ಹೆಚ್ಚಿನ ಸಂಖ್ಯೆಯ ನೇಪಾಳ ಪ್ರಜೆಗಳ ಹೆಸರುಗಳು ಪತ್ತೆಯಾಗಿವೆ. ಇಲ್ಲಿ ಅನರ್ಹ ಮತದಾರರೆಂದು ಗುರುತಿಸಲಾದ 583 ಮಂದಿಯ ಪೈಕಿ 545 ಮಂದಿ ನೇಪಾಳದ ಪ್ರಜೆಗಳಾಗಿದ್ದು, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವಿದೇಶಿ ಪ್ರಜೆಗಳ ಹೆಸರುಗಳು ಪತ್ತೆಯಾಗಿವೆ. ನೇಪಾಳದ 17, ಬ್ರಿಟನ್ನ 2, ಕೆನಡಾದ 5, ಆಸ್ಟ್ರೇಲಿಯಾದ 6, ಅಮೆರಿಕದ 6 ಹಾಗೂ ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ನಾರ್ವೆ ದೇಶಗಳ ತಲಾ ಒಬ್ಬರು ಸೇರಿದಂತೆ ಒಟ್ಟು 40 ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನೇಪಾಳ, ಪಾಕಿಸ್ತಾನ, ಅಮೆರಿಕ ಮತ್ತು ಬಾಂಗ್ಲಾದೇಶದ 22 ಪ್ರಜೆಗಳ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ನೇಪಾಳ, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳ 44 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಬೆಳಗಾವಿ ಹಾಗೂ ಹಾಸನ ಜಿಲ್ಲೆಗಳಲ್ಲಿಯೂ ನೇಪಾಳ ಮತ್ತು ಶ್ರೀಲಂಕಾದ ಪ್ರಜೆಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ಪತ್ತೆಯಾಗಿವೆ.
ಮತ್ತೊಂದೆಡೆ, ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಕೆನಡಾದ ಪ್ರಜೆಗಳು ಮತದಾರರ ಗುರುತಿನ ಚೀಟಿ ಹೊಂದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ದುಬೈಗೆ ಸಂಬಂಧಿಸಿದ ವಿವರಗಳೂ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
2002ರ ಮತದಾರರ ಪಟ್ಟಿಯ ದಾಖಲೆಗಳೊಂದಿಗೆ ಪ್ರಸ್ತುತ ಮತದಾರರ ವಿವರಗಳನ್ನು ಹೋಲಿಕೆ ಮಾಡಿದಾಗ ಕೆಲವು ವ್ಯತ್ಯಾಸಗಳು ಕಂಡುಬಂದಿವೆ. ಅಲ್ಲದೆ, ಗಣತಿ ನಮೂನೆಗಳ ಪರಿಶೀಲನೆ ಹಾಗೂ ವಿಚಾರಣೆ ವೇಳೆ ವಿದೇಶಿ ಪ್ರಜೆಗಳ ಹೆಸರುಗಳು ಪತ್ತೆಯಾಗಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವರ ಬಳಿ ವೋಟರ್ ಐಡಿ ಇದ್ದರೂ ಶಾಲಾ ಪ್ರಮಾಣಪತ್ರ, ಆಸ್ತಿ ದಾಖಲೆಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನರ್ಹರೆಂದು ಗುರುತಿಸಲಾದ ವಿದೇಶಿ ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.









