ಗದಗ: ವಿದ್ಯುತ್ ಟ್ರಾನ್ಸ್ಫಾರ್ಮರ್ನಿಂದ ಕಿಡಿ ಹಾರಿ ಬೆಂಕಿ ಹೊತ್ತಿಕೊಂಡ ಶಂಕೆಯಿಂದ ರೈತರು ಕಷ್ಟಪಟ್ಟು ಬೆಳೆದಿದ್ದ ಕಬ್ಬು, ಶೇಂಗಾ ಹಾಗೂ ಹತ್ತಿ ಬೆಳೆಗಳು ಸುಟ್ಟು ಭಸ್ಮವಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಅಮರಗಟ್ಟಿ ಗ್ರಾಮದಲ್ಲಿ ನಡೆದಿದೆ.
ರೈತ ಮಹಾಂತೇಶ ವದೆಗೋಳ ಅವರಿಗೆ ಸೇರಿದ ನಾಲ್ಕು ಎಕರೆ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿದ್ದು, ಹೊಲದ ಪಕ್ಕದಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ನ ತಾಂತ್ರಿಕ ದೋಷದಿಂದ ಕಿಡಿ ಹಾರಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಕಬ್ಬಿನ ಗದ್ದೆಯನ್ನು ಆವರಿಸಿದೆ.
ಇದೇ ಬೆಂಕಿಯಿಂದ ರೈತ ಮಹಿಳೆ ಪಾರವ್ವ ಅವರು ಬೆಳೆದಿದ್ದ ಶೇಂಗಾ ಬೆಳೆ ಹಾಗೂ ಲಕ್ಷಮ್ಮ ಅವರ ಹತ್ತಿ ಬೆಳೆಗೂ ಹಾನಿಯಾಗಿದ್ದು, ಬೆಳೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಕಣ್ಣೆದುರೇ ಬೆಳೆಗಳು ಬೆಂಕಿಗೆ ಆಹುತಿಯಾಗುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ರೈತ ಕುಟುಂಬಗಳು ಕಂಗಾಲಾಗಿವೆ.
ಬರಗಾಲದ ಸಂಕಷ್ಟದ ನಡುವೆಯೇ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ರೈತರಿಗೆ ಈ ಬೆಂಕಿ ಅನಾಹುತ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಿಂಗಳುಗಟ್ಟಲೆ ಶ್ರಮಿಸಿ ಬೆಳೆದ ಬೆಳೆಗಳು ಕ್ಷಣಾರ್ಧದಲ್ಲಿ ಬೂದಿಯಾಗಿದ್ದು, ರೈತರಿಗೆ ಭಾರಿ ನಷ್ಟ ಸಂಭವಿಸಿದೆ.
ಗಜೇಂದ್ರಗಡ ಪಟ್ಟಣದಲ್ಲಿ ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ, ಬೆಂಕಿ ಅನಾಹುತದ ಸಂದರ್ಭದಲ್ಲಿ ತಕ್ಷಣ ನೆರವು ಸಿಗದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಣ ಪಟ್ಟಣದಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬೆಳೆಗಳೆಲ್ಲ ಸುಟ್ಟು ಕರಕಲಾಗಿದ್ದವು ಎನ್ನಲಾಗಿದೆ.
ವಿದ್ಯುತ್ ಟ್ರಾನ್ಸ್ಫಾರ್ಮರ್ನ ತಾಂತ್ರಿಕ ದೋಷದಿಂದಲೇ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಪರಿಶೀಲನೆ ನಡೆಸಿ ನಿಖರ ಕಾರಣ ಪತ್ತೆಹಚ್ಚಬೇಕಿದೆ. ವಿದ್ಯುತ್ ಪರಿವರ್ತಕಗಳ ನಿರ್ವಹಣೆಯಲ್ಲಿ ಹೆಸ್ಕಾಂ ನಿರ್ಲಕ್ಷ್ಯ ವಹಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ರೈತರು ಎತ್ತಿದ್ದಾರೆ.
ಬೆಂಕಿ ಅನಾಹುತದಿಂದ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ವಿದ್ಯುತ್ ಪರಿವರ್ತಕಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.









