ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದು, ನಟ ಧನ್ವೀರ್ ಅವರದ್ದು ಎನ್ನಲಾದ ವೈರಲ್ ಆಡಿಯೋ ವಿವಾದದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ವಿಜಯಲಕ್ಷ್ಮೀ ಬೇಸರ ವ್ಯಕ್ತಪಡಿಸಿದ್ದು, ಪತ್ನಿಯ ಮಾತು ಕೇಳಿ ದರ್ಶನ್ ನಕ್ಕಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಧನ್ವೀರ್ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ದರ್ಶನ್ ಅವರನ್ನು ಜೈಲಿನಿಂದ ಹೊರತರಲು ವಿಜಯಲಕ್ಷ್ಮೀಗೆ ಇಷ್ಟವಿಲ್ಲ ಎಂಬ ರೀತಿಯ ಮಾತುಗಳು ಕೇಳಿಬಂದಿವೆ ಎನ್ನಲಾಗಿದೆ. ಈ ವಿಚಾರವನ್ನೇ ಪತಿ ದರ್ಶನ್ ಮುಂದೆ ಪ್ರಸ್ತಾಪಿಸಿರುವ ವಿಜಯಲಕ್ಷ್ಮೀ, ‘ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ನನಗೆ ಇಷ್ಟವಿಲ್ಲವಂತೆ’ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ. ಇದಕ್ಕೆ ದರ್ಶನ್ ‘ಹೌದಾ ಪುಟ್ಟ’ ಎಂದು ನಕ್ಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ ಧನ್ವೀರ್ ಆಡಿಯೋ ವಿವಾದ, ನಾಗರಾಜ್ ಸೇರಿದಂತೆ ಇತರರನ್ನು ನಿಂದಿಸಿದ್ದಾರೆ ಎನ್ನಲಾದ ವಿಚಾರ ಹಾಗೂ ಧನ್ವೀರ್ ಮನೆ ಬಳಿ ಹಣ ಕೇಳಲು ಹೋದಾಗ ನಡೆದ ಘಟನೆಗಳ ಬಗ್ಗೆಯೂ ವಿಜಯಲಕ್ಷ್ಮೀ ಪತಿಗೆ ವಿವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪತ್ನಿಯ ಮಾತುಗಳನ್ನು ಆಲಿಸಿದ ದರ್ಶನ್, ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಧನ್ವೀರ್ ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದರೆ ಅವರ ಹಿಂದೆ ಯಾರಿದ್ದಾರೆ ಎಂದು ದರ್ಶನ್ ಪ್ರಶ್ನಿಸಿದ್ದು, ಇದಕ್ಕೆ ವಿಜಯಲಕ್ಷ್ಮೀ ತಮಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು ಧನ್ವೀರ್ ಏನೇ ಮಾತನಾಡಿದರೂ ಕಾನೂನಿನ ಚೌಕಟ್ಟು ಮೀರಿ ಯಾವುದೇ ಕ್ರಮ ಕೈಗೊಳ್ಳಬಾರದು. ಕಾನೂನುಬದ್ಧವಾಗಿಯೇ ಹೋರಾಟ ಮುಂದುವರಿಸಬೇಕು ಎಂದು ದರ್ಶನ್ ಪತ್ನಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ‘ನಮಗೂ ಕಾಲ ಬರುತ್ತೆ’ ಎಂದು ಹೇಳುವ ಮೂಲಕ ವಿಜಯಲಕ್ಷ್ಮೀಗೆ ಧೈರ್ಯ ತುಂಬಿದ್ದಾರೆ ಎಂದು ತಿಳಿದುಬಂದಿದೆ.









