ಬೆಂಗಳೂರು: ಗಾಯಕ ಹಾಗೂ ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಅವರ ಹೊಸ ಹಾಡು ‘ಮೈಮಾಟ’ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಹಾಡಿನ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರ ವೈಯಕ್ತಿಕ ಜೀವನ ಹಾಗೂ ಮಾಜಿ ಪತ್ನಿ ನಿವೇದಿತಾ ಗೌಡ ಅವರೊಂದಿಗೆ ಕೆಲವರು ಹೋಲಿಕೆ ಮಾಡುತ್ತಿದ್ದು, ಇದೀಗ ಈ ಬಗ್ಗೆ ಸ್ವತಃ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಹಾಡನ್ನು ಯಾರನ್ನೂ ನೋಯಿಸುವ ಉದ್ದೇಶದಿಂದ ರಚಿಸಿಲ್ಲ. ಕೇವಲ ಮನರಂಜನೆಗಾಗಿ ಹೊಸ ಸಂಗೀತ ಶೈಲಿಯಲ್ಲಿ ಪ್ರಯೋಗ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ವೈಯಕ್ತಿಕ ಜೀವನಕ್ಕೆ ಹೋಲಿಸಿ ಊಹಾಪೋಹ ಹರಡಬೇಡಿ’:
‘ಮೈಮಾಟ’ ಹಾಡಿನ ಕುರಿತು ಸ್ಪಷ್ಟನೆ ನೀಡಿರುವ ಚಂದನ್ ಶೆಟ್ಟಿ, ತಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಘಟನೆಗಳು ನಡೆಯುವುದಕ್ಕೂ ಮೊದಲೇ ಹಾಡನ್ನು ಸಿದ್ಧಪಡಿಸಲಾಗಿತ್ತು ಎಂದು ಹೇಳಿದ್ದಾರೆ.
ಇತ್ತೀಚೆಗೆ ಕೆಲವು ಸುದ್ದಿ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಾಡನ್ನು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಹಲವು ಪ್ರಶ್ನೆಗಳು ಮತ್ತು ಊಹಾಪೋಹಗಳು ಹರಿದಾಡುತ್ತಿವೆ. ಆದ್ದರಿಂದ ಹಾಡನ್ನು ತಮ್ಮ ವೈಯಕ್ತಿಕ ಜೀವನದೊಂದಿಗೆ ಹೋಲಿಸಿ ಅನಗತ್ಯ ಊಹಾಪೋಹ ಹಾಗೂ ನಕಾರಾತ್ಮಕತೆಯನ್ನು ಹರಡಬಾರದು ಎಂದು ಮನವಿ ಮಾಡಿದ್ದಾರೆ.
‘ಸಂಗೀತ ಕಲಾವಿದನ ಸೃಜನಶೀಲ ಅಭಿವ್ಯಕ್ತಿ’:
ಪ್ರತಿಯೊಂದು ಹಾಡೂ ಕಲಾವಿದನ ವೈಯಕ್ತಿಕ ಜೀವನದ ಕಥೆಯಾಗಿರಬೇಕೆಂದಿಲ್ಲ. ಸಂಗೀತ ಎನ್ನುವುದು ಸೃಜನಶೀಲತೆಯ ಅಭಿವ್ಯಕ್ತಿ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
‘ಮೈಮಾಟ’ ಹಾಡಿಗೆ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಅವರು, ನಿಮ್ಮ ಪ್ರೀತಿಯೇ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಲು ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.
ನಿವೇದಿತಾ ಗೌಡ ಪೋಸ್ಟ್ನಿಂದ ಶುರುವಾಗಿದ್ದ ಚರ್ಚೆ:
‘ಮೈಮಾಟ’ ಹಾಡು ಬಿಡುಗಡೆಯಾದ ಸಮಯದಲ್ಲೇ ಚಂದನ್ ಶೆಟ್ಟಿ ಅವರ ಮಾಜಿ ಪತ್ನಿ ನಿವೇದಿತಾ ಗೌಡ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.
ಮಹತ್ವಾಕಾಂಕ್ಷೆಯುಳ್ಳ ಹುಡುಗಿಯ ಪ್ರೇಮ ಜೀವನ ದುರದೃಷ್ಟಕರವಾಗಿದ್ದರೆ ಅದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾದ ಕಥೆಯಂತೆ ಕಾಣಬಹುದು. ಆದರೆ ತಮ್ಮ ಜೀವನ ಮಾತ್ರ ಹಾರರ್ ಕಥೆಯಂತಿತ್ತು, ಭೂತಕಾಲ ತಮ್ಮನ್ನು ಬಿಟ್ಟು ಕದಲುತ್ತಿಲ್ಲ ಎಂಬರ್ಥದ ಮಾತುಗಳನ್ನು ಅವರು ಬರೆದುಕೊಂಡಿದ್ದರು.
ನಿವೇದಿತಾ ಅವರ ಈ ಪೋಸ್ಟ್ ಮತ್ತು ‘ಮೈಮಾಟ’ ಹಾಡಿನ ಸಾಹಿತ್ಯ ಒಂದೇ ಸಮಯದಲ್ಲಿ ಚರ್ಚೆಗೆ ಬಂದಿದ್ದರಿಂದ, ಎರಡನ್ನೂ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ವ್ಯಕ್ತವಾಗಿದ್ದವು. ಇದೀಗ ಚಂದನ್ ಶೆಟ್ಟಿ ನೀಡಿರುವ ಸ್ಪಷ್ಟನೆಯಿಂದ ಈ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.









