ಮಂಗಳೂರು: ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (SIT) ಚುರುಕುಗೊಳಿಸಿದೆ. ಪ್ರಕರಣದ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳು ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭಾಸ್ಕರ್ ರೈ, ಪಿಎಸ್ಐ ಯೋಗೇಶ್ ಹಾಗೂ ಸಿಐಡಿ ಡಿವೈಎಸ್ಪಿ ರುದ್ರಮುನಿ ಅವರು ಹಲವು ಮಹತ್ವದ ದಾಖಲೆಗಳೊಂದಿಗೆ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯ ಭಾಗವಾಗಿ ಹಿಂದಿನ ತನಿಖೆಯ ಕುರಿತು ಮಾಹಿತಿ ಸಂಗ್ರಹಿಸಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಭಾಸ್ಕರ್ ರೈ ಸೇರಿದಂತೆ ಮೂವರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಎಸ್ಐಟಿ ಕಚೇರಿಗೆ ಮೂವರು ಅಧಿಕಾರಿಗಳು ಹಲವು ಕಡತಗಳೊಂದಿಗೆ ಆಗಮಿಸಿದ್ದಾರೆ. ಬಳಿಕ ಅವರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ವಿಚಾರಣೆ ನಡೆಸಿದ್ದಾರೆ.
ವಿಶೇಷವಾಗಿ ಸೌಜನ್ಯ ಕೊಲೆ ಪ್ರಕರಣದ ಆರಂಭಿಕ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇನ್ಸ್ಪೆಕ್ಟರ್ ಭಾಸ್ಕರ್ ರೈ ಅವರ ವಿಚಾರಣೆ ಮಹತ್ವ ಪಡೆದುಕೊಂಡಿದೆ. ಈ ಹಿಂದೆ ಅವರು ಪ್ರಕರಣದ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಅಂದಿನ ತನಿಖೆಯ ಪ್ರಕ್ರಿಯೆಗಳು, ಸಂಗ್ರಹಿಸಲಾಗಿದ್ದ ಸಾಕ್ಷ್ಯಗಳು ಹಾಗೂ ತನಿಖೆಗೆ ಸಂಬಂಧಿಸಿದ ದಾಖಲೆಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ ಎನ್ನಲಾಗಿದೆ.
ಅದೇ ರೀತಿ, ಅಂದಿನ ಪಿಎಸ್ಐ ಯೋಗೇಶ್ ಮತ್ತು ಸಿಐಡಿ ಡಿವೈಎಸ್ಪಿ ರುದ್ರಮುನಿ ಅವರಿಂದಲೂ ಹಿಂದಿನ ತನಿಖೆಗೆ ಸಂಬಂಧಿಸಿದ ವಿವರಗಳನ್ನು ಎಸ್ಐಟಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಮೂವರು ಅಧಿಕಾರಿಗಳು ತಂದಿರುವ ಕಡತಗಳನ್ನು ಪರಿಶೀಲಿಸುವ ಮೂಲಕ ಪ್ರಕರಣದ ಹಿಂದಿನ ತನಿಖೆಯ ವಿವಿಧ ಆಯಾಮಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ.
ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳ ವಿಚಾರಣೆ ಮಹತ್ವದ ಬೆಳವಣಿಗೆಯಾಗಿದೆ. ಎಸ್ಐಟಿ ತಂಡವು ಹಳೆಯ ದಾಖಲೆಗಳು ಹಾಗೂ ಅಧಿಕಾರಿಗಳಿಂದ ಪಡೆಯುತ್ತಿರುವ ಮಾಹಿತಿಯನ್ನು ಆಧರಿಸಿ ಮುಂದಿನ ತನಿಖೆ ಕೈಗೊಳ್ಳುತ್ತಿದೆ.










