ಹಾಂಗ್ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಆಘಾತ ಅನುಭವಿಸಿದೆ. ಮಾಂಗ್ ಕೋಕ್ನಲ್ಲಿ ನಡೆದ ಕೇವಲ 6 ಓವರ್ಗಳ ಪಂದ್ಯದಲ್ಲಿ ಪಾಕಿಸ್ತಾನ ತಂಡ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 88 ರನ್ ಗಳಿಸಿದರೆ, ಈ ಗುರಿಯನ್ನು ಪಾಕಿಸ್ತಾನ ಕೇವಲ 23 ಎಸೆತಗಳಲ್ಲೇ ಬೆನ್ನಟ್ಟಿದೆ.
ಪಾಕಿಸ್ತಾನದ ನಾಯಕ ಅಬ್ಬಾಸ್ ಅಫ್ರಿದಿ ಹಾಗೂ ಖವಾಜಾ ನಫೆ ಅವರ ಸ್ಫೋಟಕ ಬ್ಯಾಟಿಂಗ್ಗೆ ಭಾರತೀಯ ಬೌಲರ್ಗಳು ತತ್ತರಿಸಿದ್ದಾರೆ. ಅದರಲ್ಲೂ ಕೃನಾಲ್ ಪಾಂಡ್ಯ ಪಾಲಿಗೆ ಈ ಪಂದ್ಯ ಮರೆಯಲಾಗದ ಸೋಲಿನ ಅನುಭವ ನೀಡಿದೆ.
ಶಶಾಂಕ್ ಸಿಂಗ್ ಏಕಾಂಗಿ ಹೋರಾಟ!
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ರಾಹುಲ್ ತ್ರಿಪಾಠಿ 9 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ನಿತೀಶ್ ರಾಣಾ 14 ಎಸೆತಗಳಲ್ಲಿ 19 ರನ್ ಗಳಿಸಿದರು.
ಇನ್ನು ಶಶಾಂಕ್ ಸಿಂಗ್ ಮಾತ್ರ ಪಾಕ್ ಬೌಲರ್ಗಳ ವಿರುದ್ಧ ಅಬ್ಬರಿಸಿದರು. ಕೇವಲ 11 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 40 ರನ್ ಸಿಡಿಸಿದರು. ಆದರೆ ನಾಯಕ ಕೃನಾಲ್ ಪಾಂಡ್ಯ ಮೊದಲ ಎಸೆತದಲ್ಲೇ ಔಟಾದರು. ರಾಹುಲ್ ತೆವಾಟಿಯಾ ಕೂಡ ಗೋಲ್ಡನ್ ಡಕ್ಗೆ ಬಲಿಯಾದರು. ಹೀಗಾಗಿ ಭಾರತ ತಂಡ 88 ರನ್ಗಳ ಸಾಧಾರಣ ಮೊತ್ತಕ್ಕೆ ಸೀಮಿತವಾಯಿತು.
ಕೃನಾಲ್ ಓವರ್ನಲ್ಲಿ ಅಬ್ಬಾಸ್ ಅಫ್ರಿದಿ ಸಿಕ್ಸರ್ ಸುನಾಮಿ!
89 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಭದಿಂದಲೇ ಭಾರತೀಯ ಬೌಲರ್ಗಳ ಮೇಲೆ ಸವಾರಿ ಮಾಡಿತು. ಕೃನಾಲ್ ಪಾಂಡ್ಯ ಎಸೆದ ಮೊದಲ ಓವರ್ನಲ್ಲಿ ಪಾಕ್ ನಾಯಕ ಅಬ್ಬಾಸ್ ಅಫ್ರಿದಿ ಸತತ ಐದು ಸಿಕ್ಸರ್ಗಳನ್ನು ಸಿಡಿಸಿ ಅಬ್ಬರಿಸಿದರು.
ಕೇವಲ 8 ಎಸೆತಗಳನ್ನು ಎದುರಿಸಿದ ಅಬ್ಬಾಸ್, 5 ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 35 ರನ್ ಚಚ್ಚಿದರು. ಮತ್ತೊಂದೆಡೆ ಖವಾಜಾ ನಫೆ ಕೂಡ 12 ಎಸೆತಗಳಲ್ಲಿ 41 ರನ್ ಸಿಡಿಸಿ ಪಾಕ್ ಗೆಲುವಿಗೆ ವೇಗ ನೀಡಿದರು.
ಬಳಿಕ ಅಬ್ದುಲ್ ಸಮದ್ ಅಜೇಯ 7 ರನ್ ಗಳಿಸಿದರೆ, ಇರ್ಫಾನ್ ಖಾನ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಪಾಕಿಸ್ತಾನದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಪಾಕ್ ತಂಡ 23 ಎಸೆತಗಳಲ್ಲೇ ಗುರಿ ತಲುಪಿ ಭಾರತಕ್ಕೆ ಸೋಲಿನ ರುಚಿ ತೋರಿಸಿತು. ಈ ಸೋಲಿನ ಬಳಿಕ ಭಾರತ ತಂಡ ಅಕ್ಟೋಬರ್ 31ರಂದು ಯುಎಇ ವಿರುದ್ಧ ಮುಂದಿನ ಪಂದ್ಯವನ್ನಾಡಲಿದೆ.









