ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದಿಂದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹೊರಬಂದಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಆರಂಭದಲ್ಲಿ ಅನಿರುದ್ಧ್ ತಮ್ಮ ಮದುವೆಯ ಕಾರಣದಿಂದ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ಅವರ ನಿರ್ಧಾರಕ್ಕೆ ಮದುವೆಯಲ್ಲ, ಬದಲಾಗಿ ಸಾಲು ಸಾಲು ಸಿನಿಮಾಗಳ ಕೆಲಸ ಹಾಗೂ ಸಮಯದ ಅಭಾವವೇ ಕಾರಣ ಎನ್ನಲಾಗುತ್ತಿದೆ.
ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾದಲ್ಲಿ ಅನಿರುದ್ಧ್ ನೀಡಿದ್ದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಭಾರಿ ಜನಪ್ರಿಯತೆ ಪಡೆದಿದ್ದವು. ಹೀಗಾಗಿ ‘ಕಿಂಗ್’ ಸಿನಿಮಾದಲ್ಲಿಯೂ ಈ ಜೋಡಿಯ ಸಂಗೀತದ ಮೋಡಿ ಮುಂದುವರಿಯಲಿದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈ ಸುದ್ದಿ ನಿರಾಸೆ ಮೂಡಿಸಿದೆ.
ದಕ್ಷಿಣ ಭಾರತದ ಹಲವು ದೊಡ್ಡ ಬಜೆಟ್ ಸಿನಿಮಾಗಳ ಸಂಗೀತ ಸಂಯೋಜನೆಯಲ್ಲಿ ಅನಿರುದ್ಧ್ ರವಿಚಂದರ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳ ಕೆಲಸಗಳು ಇರುವುದರಿಂದ ‘ಕಿಂಗ್’ ಚಿತ್ರಕ್ಕೆ ಅಗತ್ಯವಿರುವಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರತಂಡದೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ ಬಳಿಕ ಅನಿರುದ್ಧ್ ಸಿನಿಮಾದ ಪೂರ್ಣ ಪ್ರಮಾಣದ ಸಂಗೀತ ಸಂಯೋಜನೆಯ ಜವಾಬ್ದಾರಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಆದರೆ ಅನಿರುದ್ಧ್ ನಿರ್ಗಮನದ ಕುರಿತು ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬರಬೇಕಿದೆ. ವಿಶೇಷವೆಂದರೆ ಅನಿರುದ್ಧ್ ‘ಕಿಂಗ್’ ಸಿನಿಮಾದಿಂದ ಹಿಂದೆ ಸರಿದಿದ್ದರೂ, ಚಿತ್ರಕ್ಕಾಗಿ ಈಗಾಗಲೇ ಒಂದು ಪವರ್ಫುಲ್ ಥೀಮ್ ಟ್ರ್ಯಾಕ್ ಸಂಯೋಜಿಸಿದ್ದಾರೆ ಎನ್ನಲಾಗಿದೆ.
ಈ ಥೀಮ್ ಟ್ರ್ಯಾಕ್ ಚಿತ್ರತಂಡಕ್ಕೆ ಮೆಚ್ಚುಗೆಯಾಗಿದ್ದು, ಅದನ್ನು ಸಿನಿಮಾದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಹೀಗಾಗಿ ಅನಿರುದ್ಧ್ ಪೂರ್ಣ ಪ್ರಮಾಣದಲ್ಲಿ ಸಂಗೀತ ನೀಡದಿದ್ದರೂ, ಅವರ ಸಂಗೀತದ ಸ್ಪರ್ಶ ‘ಕಿಂಗ್’ ಸಿನಿಮಾದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.
ಅನಿರುದ್ಧ್ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕರಾದ ಸಚಿನ್–ಜಿಗರ್ ಜೋಡಿ ‘ಕಿಂಗ್’ ಸಿನಿಮಾದ ಸಂಗೀತ ಜವಾಬ್ದಾರಿ ವಹಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಜೋಡಿ ಅನಿರುದ್ಧ್ ಸಂಯೋಜಿಸಿರುವ ಥೀಮ್ ಟ್ರ್ಯಾಕ್ ಅನ್ನು ಮರುರೂಪಿಸಿ ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ.
ಇದರ ಜೊತೆಗೆ ಸಿನಿಮಾದ ಉಳಿದ ಹಾಡುಗಳ ಸಂಗೀತ ಸಂಯೋಜನೆಯನ್ನೂ ಸಚಿನ್–ಜಿಗರ್ ಅವರೇ ಪೂರ್ಣಗೊಳಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹಲವು ಜನಪ್ರಿಯ ಹಾಡುಗಳನ್ನು ನೀಡಿರುವ ಈ ಸಂಗೀತ ಜೋಡಿ ಶಾರುಖ್ ಖಾನ್ ಅವರ ಬಿಗ್ ಬಜೆಟ್ ಸಿನಿಮಾಕ್ಕೆ ಯಾವ ರೀತಿಯ ಸಂಗೀತ ನೀಡಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.










