ಬೆಂಗಳೂರು: “ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಈ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಸದಾಶಿವನಗರ ನಿವಾಸ ಮತ್ತು ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಈ ವಿಚಾರ ತಿಳಿಸಿದರು.
“ನಾನು ಈಗಷ್ಟೇ ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜ ಹಾರಿಸಿದ್ದೇನೆ. ಈ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ಮುಂದಾಗಿದ್ದೇವೆ. ಈ ಹಿಂದೆ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ನಮಗೆ ಈವರೆಗೂ ಮಾನ್ಯತೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದು, ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಲಾಗುವುದು. ರಾಷ್ಟ್ರಧ್ವಜದ ಗೌರವ ಮತ್ತು ನಿಯಮಗಳಿಗೆ ಯಾವುದೇ ಧಕ್ಕೆಯಾಗದಂತೆ ಕನ್ನಡ ಧ್ವಜದ ಬಳಕೆ, ಸ್ಥಾನಮಾನ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ” ಎಂದರು.
“ಮತ್ತೊಮ್ಮ ಸಂಪುಟದಲ್ಲಿ ತೀರ್ಮಾನ ಮಾಡಿ ಕಾನೂನು ತಂದು ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜವನ್ನು ಹಾರಿಸಲು ತೀರ್ಮಾನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಒಳಗಡೆ ಮಾತ್ರವಲ್ಲ, ವಿಧಾನಸೌಧದಲ್ಲೂ ಈ ಧ್ವಜವನ್ನು ಹಾರಿಸಲು ಸಾರ್ವಜನಿಕ ಚರ್ಚೆಗೆ, ಶಾಸಕರ ಚರ್ಚೆಗೆ ಇನ್ನು ಮುಂದೆ ಅವಕಾಶ ಮಾಡಿಕೊಟ್ಟು ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಹೊಸ ರೂಪ ಕೊಡಲು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ಣಯ ಮಾಡಿ ಕಾನೂನುಬದ್ಧವಾಗಿ ಏನೆಲ್ಲ ರಕ್ಷಣೆ ಮಾಡಬೇಕು ಆ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಇದು ನಮ್ಮದಲ್ಲ, ನಿಮ್ಮ ಸರ್ಕಾರ. ಕನ್ನಡಿಗರ ಭಾವನೆಯ ಹೆಗ್ಗುರುತಾಗಿರುವ ಕೆಂಪು ಹಳದಿ ಬಾವುಟಕ್ಕೆ ಗೌರವ ನೀಡಲಾಗುವುದು. ಕನ್ನಡದ ಜ್ಞಾನ, ಪರಂಪರೆ, ಸಂಸ್ಕೃತಿ, ಸರ್ವಧರ್ಮ ಪರಂಪರೆ ಸಮಾನತೆ, ಶಾಂತಿಯ ಸಂದೇಶ ಸಾರುವ ಈ ಬಾವುಟವನ್ನು ನಾಡಧ್ವಜವಾಗಿ ಅಧಿಕೃತಗೊಳಿಸಲು ಮುಂದಾಗಿದ್ದೇವೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಹೆಗ್ಗುರತನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಈ ತೀರ್ಮಾನ ಮಾಡಲಾಗುವುದು” ಎಂದು ವಿವರಿಸಿದರು.
“ಕನ್ನಡ ರಾಜ್ಯೋತ್ಸವದ 71ನೇ ವರ್ಷದಿಂದ ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡದ ಹಿರಿಮೆ ಸಾರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸುವುದರ ಜತೆಗೆ, ಸರ್ಕಾರದ ಬೆಂಬಲ ಹೊಂದಿರುವ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆಗಳೂ ಕನ್ನಡ ಧ್ವಜ ಹಾರಿಸುವಂತೆ ಈ ತಿಂಗಳಲ್ಲೇ ಸರ್ಕಾರದ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
ಈ ದೇಶದಿಂದ ಹೊರಗಿರುವ ಕನ್ನಡಿಗರು ಕನ್ನಡ ಸಂಘಟನೆ ಕಟ್ಟಿಕೊಂಡು ಮಾತೃಭಾಷೆ ಉಳಿಸಲು ಶ್ರಮಿಸುತ್ತಿದ್ದಾರೆ. ಅವರಿಗೆ ನಾನು ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ. ನುಡಿ ಉಳಿದರೆ ನಾಡು ಉಳಿಯುತ್ತದೆ. ನಾಡು ಉಳಿದರೆ ನುಡಿ ಉಳಿಯುತ್ತದೆ. ನಾವು ಇಲ್ಲಿ ರಾಜ್ಯೋತ್ಸವ ಮಾತ್ರ ಆಚರಿಸುತ್ತಿಲ್ಲ. ಕನ್ನಡ ತಾಯಿ ಭುವನೇಶ್ವರಿ ಸೇವೆ. ಇದು ಮಾತೃಭಾಷೆಯ ಪೂಜೆ. ತಾಯಿ ನುಡಿ ಸೇವೆಗಿಂದ ದೊಡ್ಡ ಧರ್ಮ ಮತ್ತೊಂದಿಲ್ಲ.
ಮಗು ಹುಟ್ಟಿದಾಗ ತಾಯಿ ಮಗುವನ್ನು ಪ್ರೀತಿಸಿದಂತೆ ನಾವು ನಮ್ಮ ತಾಯಿ ಭಾಷೆಯನ್ನು ಪ್ರೀತಿಸಬೇಕು. ಕನ್ನಡವನ್ನು ಪ್ರೀತಿಸುವುದು, ತಾಯಿಯನ್ನು ಪ್ರೀತಿಸಿದಂತೆ. ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಗಾರುತ್ತದೆ. ಕನ್ನಡಕಕ್ಕೆ ಕಿರುಬೆರಳು ಎತ್ತಿದರೂ ಸಾಕು, ಅದು ಗೋವರ್ಧನಗಿರಿಯಾಗುತ್ತದೆ ಎಂದು ಕುವೆಂಪು ಅವರು ಹೇಳಿದ್ದಾರೆ. ಕುವೆಂಪು ಅವರು ಕನ್ನಡದಲ್ಲಿ ವಿಶ್ವಮಾನವ ಸಂದೇಶ ಸಾರಿದ್ದಾರೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ನಮ್ಮ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಸಂದಿದೆ” ಎಂದು ತಿಳಿಸಿದರು.
“ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸರು, ಪುರಂದರ ದಾಸರು, ಸರ್ವಜ್ಞ, ಬಸವಣ್ಣ ಹುಟ್ಟಿದ ನಾಡು. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಗೋಕಾಕ್, ಅನಂತಮೂರ್ತಿ, ತೇಜಸ್ವಿ, ಸಿದ್ದಲಿಂಗಯ್ಯ, ನಿಸಾರ್ ಅಹ್ಮದ್ ರಂತಹ ದಿಗ್ಗಜರು ಮಾಡಿರುವ ಸೇವೆ, ನಮ್ಮ ಶ್ರೀಮಂತ ಭಾಷೆಗೆ ಕೊಟ್ಟಿರುವ ಗೌರವವನ್ನು ನಾವು ಸ್ಮರಿಸಬೇಕು. ಭಾರತ ಜನನಿಯ ತನುಜಾತೆ ಕನ್ನಡಮ್ಮನ ನಾಡಗೀತೆ ಕನ್ನಡಿಗನ ಸ್ವಾಭಿಮಾನ ಗೀತೆಯನ್ನು ಪ್ರತಿ ಕಾರ್ಯಕ್ರಮದಲ್ಲಿ ಹಾಡುತ್ತೇವೆ” ಎಂದರು.










