ಫ್ಲೋರಿಡಾ: ಅಮೆರಿಕದ ಫ್ಲೋರಿಡಾದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡು ಭೀಕರ ದುರಂತ ಸಂಭವಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್ನಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ವಿಮಾನದಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ. ವಿಮಾನವು ರಸ್ತೆಯ ಪಕ್ಕದಲ್ಲಿ ಅಪ್ಪಳಿಸಿದ ತಕ್ಷಣ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ.
ಟೆಕ್ಸಾಸ್ನಿಂದ ಬಹಾಮಾಸ್ಗೆ ತೆರಳುತ್ತಿದ್ದ ಲಿಯರ್ಜೆಟ್ 60 ವಿಮಾನವು ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್ಹ್ಯಾವನ್ ವಸತಿ ಪ್ರದೇಶದ ಬಳಿ ಪತನಗೊಂಡಿದೆ. ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಹವಾಮಾನ ವೈಪರೀತ್ಯ ಎದುರಿಸಿತ್ತು ಎನ್ನಲಾಗಿದೆ.
ಫ್ಲೈಟ್ ಟ್ರ್ಯಾಕಿಂಗ್ ಮಾಹಿತಿ ಪ್ರಕಾರ, ವಿಮಾನವು ನಿಮಿಷಕ್ಕೆ 10 ಸಾವಿರದಿಂದ 30 ಸಾವಿರ ಅಡಿಗಳವರೆಗೆ ಅತಿವೇಗದಲ್ಲಿ ಕೆಳಮುಖವಾಗಿ ಕುಸಿದಿದೆ. ಈ ವೇಳೆ ಪೈಲಟ್ಗಳು ಮೇಡೇ ಸಂದೇಶ ರವಾನಿಸಿದ್ದು, ವಿಮಾನ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿದೆ.
ಅಪಘಾತದ ಸ್ಥಳದ ಸಮೀಪವಿದ್ದ ಮೊಬೈಲ್ ಹೋಮ್ ಸಮುದಾಯದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 600 ಜನರನ್ನು ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ನೆಲದ ಮೇಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ಫ್ಲೋರಿಡಾ ಗವರ್ನರ್ ತಿಳಿಸಿದ್ದಾರೆ.
ಈ ಭೀಕರ ವಿಮಾನ ದುರಂತದ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಜಂಟಿಯಾಗಿ ತನಿಖೆ ಆರಂಭಿಸಿವೆ. ಭಾರೀ ಮಳೆಯೇ ಅಪಘಾತಕ್ಕೆ ಕಾರಣವಾಗಿದೆಯೇ ಎಂಬ ಬಗ್ಗೆ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.










