ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ನಾಲ್ಕನೇ ದಿನ.
ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ.
ದೇವಾಲಯದ ಆವರಣದ ಎಲ್ಲಾ ಸರತಿ ಸಾಲುಗಳಲ್ಲೂ ಭಕ್ತರು ತುಂಬಿ ತುಳುಕುತ್ತಿದ್ದಾರೆ. ಧರ್ಮದರ್ಶನದ ಜೊತೆಗೆ 1,000 ರೂ. ಹಾಗೂ 300 ರೂ. ವಿಶೇಷ ದರ್ಶನದ ಸಾಲುಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾಯುತ್ತಿದ್ದಾರೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್, ನೇರ ವಿಶೇಷ ದರ್ಶನದ ಟಿಕೆಟ್ ಮಾರಾಟ ಹಾಗೂ ಲಾಡು ಪ್ರಸಾದ ಮಾರಾಟದಿಂದ ಕೇವಲ ಮೂರು ದಿನಗಳಲ್ಲಿ 5 ಕೋಟಿ ರೂ.ಗೂ ಅಧಿಕ ಆದಾಯ ಸಂಗ್ರಹವಾಗಿದೆ.
ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ದೇವಿಯ ದರ್ಶನಕ್ಕೆ ಸ್ವಲ್ಪ ವಿಳಂಬವಾಗುತ್ತಿದೆ. ಆದರೂ ಭಕ್ತರು ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಇಂದು ಹಾಸನಾಂಬೆ ದರ್ಶನಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಮಠಾಧೀಶರು ಹಾಗೂ ನ್ಯಾಯಾಧೀಶರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ದೇವಾಲಯದ ಸುತ್ತಮುತ್ತ ಭದ್ರತೆ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ.










