ಉತ್ತರ ಕನ್ನಡ: ವಾರಾಂತ್ಯದ ರಜೆ ಕಳೆಯಲು ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳ ತಂಡಕ್ಕೆ ಸಮುದ್ರದ ಅಲೆಗಳು ಸಾವಿನ ರೂಪದಲ್ಲಿ ಎರಗಿವೆ. ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ ಏಕಾಏಕಿ ಅಪ್ಪಳಿಸಿದ ಭಾರಿ ಅಲೆಗೆ ಐವರು ಉದ್ಯೋಗಿಗಳು ಕೊಚ್ಚಿಹೋಗಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಇನ್ನು ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ.
16 ಉದ್ಯೋಗಿಗಳ ತಂಡದಿಂದ ಗೋಕರ್ಣ ಪ್ರವಾಸ
ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಅಲೋರಿಯಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿತ್ತು. ದುಬ್ಬಣಶಶಿ ಬೀಚ್ನಲ್ಲಿರುವ ಕೋಜೆ ರೆಸಾರ್ಟ್ನಲ್ಲಿ ತಂಡ ವಾಸ್ತವ್ಯ ಹೂಡಿತ್ತು. ಈ ವೇಳೆ ಕೆಲ ಉದ್ಯೋಗಿಗಳು ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿದ್ದರು. ಆಗ ಏಕಾಏಕಿ ಅಪ್ಪಳಿಸಿದ ಭಾರಿ ಅಲೆಗೆ ಐವರು ಸಿಲುಕಿ ಸಮುದ್ರದಲ್ಲಿ ಕೊಚ್ಚಿಹೋಗಿದ್ದರು.
ಜೀವರಕ್ಷಕ ಸಿಬ್ಬಂದಿ ಕಾರ್ಯಾಚರಣೆ; ಮೂವರು ಸಾವು
ಘಟನೆ ತಿಳಿಯುತ್ತಿದ್ದಂತೆ ರೆಸಾರ್ಟ್ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸಮುದ್ರದಲ್ಲಿ ಸಿಲುಕಿದ್ದವರನ್ನು ದಡಕ್ಕೆ ಕರೆತರುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಜಾರ್ಖಂಡ್ ಮೂಲದ 22 ವರ್ಷದ ಶೋಭಾ ದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಇನ್ನು ತಂಡದ ನಾಯಕ ಮಹಮ್ಮದ್ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ನಾಪತ್ತೆಯಾಗಿದ್ದ ವಿಶ್ವ ಮೃತದೇಹ ಪತ್ತೆ
ಈ ದುರಂತದಲ್ಲಿ ಬೆಂಗಳೂರಿನ ಕಲ್ಯಾಣನಗರದ 24 ವರ್ಷದ ವಿಶ್ವ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದಾಗ ಅವರ ಮೃತದೇಹ ಪತ್ತೆಯಾಗಿದೆ. ಇನ್ನು ನಿಶಾಂತ್ ಮತ್ತು ಮಹಮ್ಮದ್ ಖಾಸಿಂ ಅವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರವಾಸಿಗರಿಗೆ ಪೊಲೀಸರ ಎಚ್ಚರಿಕೆ
ಘಟನೆ ನಡೆದ ಸ್ಥಳಕ್ಕೆ ಗೋಕರ್ಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಘಟನೆ ಬೆನ್ನಲ್ಲೇ ಕಡಲತೀರಗಳಿಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಬಗ್ಗೆ ರೆಸಾರ್ಟ್ ಹಾಗೂ ಹೋಮ್ಸ್ಟೇ ಮಾಲೀಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಸಮುದ್ರದ ಅಲೆಗಳ ತೀವ್ರತೆಯನ್ನು ನಿರ್ಲಕ್ಷಿಸಿ ನೀರಿಗಿಳಿಯುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಗೋಕರ್ಣದ ಈ ದುರಂತ ಮತ್ತೊಂದು ಎಚ್ಚರಿಕೆಯಾಗಿದೆ.









