ಲಕ್ಷ್ಮೇಶ್ವರ: ರೈತರು ಬೆಳೆ ಮಾರಾಟ ಮಾಡಿ ತಂದಿದ್ದ ಹಣಕ್ಕೆ ಕನ್ನ ಹಾಕಿದ್ದ ಕಳ್ಳರು ಸೇರಿದಂತೆ ನಾಲ್ಕು ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಲಕ್ಷ್ಮೇಶ್ವರ ಪೊಲೀಸರು, ಆರೋಪಿಗಳನ್ನು ಬಂಧಿಸಿ ₹2.48 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಜಪ್ತಿ ಮಾಡಿದ್ದಾರೆ.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನದ ಸರ ಕಳ್ಳತನ, ಸೋಗಿಹಾಳ ಗ್ರಾಮದ ಹೊರವಲಯದಲ್ಲಿನ ಶೆಡ್ನಲ್ಲಿದ್ದ ಎರಡು ಎತ್ತು ಹಾಗೂ ಒಂದು ಆಕಳ ಕಳ್ಳತನ ಮತ್ತು ರೈತರು ಬೆಳೆ ಮಾರಾಟ ಮಾಡಿ ಇಟ್ಟುಕೊಂಡಿದ್ದ ₹77,500 ಹಾಗೂ ₹48,000 ನಗದು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣಗಳ ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎನ್. ಹಾಗೂ ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ಬಿ.ವಿ. ನ್ಯಾಮಗೌಡ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.
ತಂಡವು ಕಾರ್ಯಾಚರಣೆ ನಡೆಸಿ ಅನೀಲ ಅಲಿಯಾಸ್ ಗಂಗ್ಯಾ (ಹುಬ್ಬಳ್ಳಿ), ತಡಸದ ಅಲ್ತಾಫ್ ಬೇಪಾರಿ, ಇಮಾಮಹುಸೇನ ಮಹಾಲ್ದಾರ ಹಾಗೂ ಸಾಹಿಲ್ ಅಕ್ರಂ (ದಾವಣಗೆರೆ) ಅವರನ್ನು ಪತ್ತೆಹಚ್ಚಿದೆ. ಆರೋಪಿತರಿಂದ ₹1.30 ಲಕ್ಷ ಮೌಲ್ಯದ ಬಂಗಾರದ ಸರ ಹಾಗೂ ₹1,18,500 ನಗದು ಸೇರಿ ಒಟ್ಟು ₹2,48,500 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಆನಂದ ಕ್ಯಾರಕಟ್ಟಿ, ಟಿ.ಕೆ. ರಾಠೋಡ ಸೇರಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಗದಗ ತಾಂತ್ರಿಕ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರಕರಣಗಳನ್ನು ಭೇದಿಸಿದ ಪೊಲೀಸ್ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










