ಹಾಸನ: ಹಾಸನದ ಅಧಿದೇವತೆ ಹಾಸನಾಂಬೆ ದೇಗುಲದಲ್ಲಿ ಭಕ್ತರ ದಟ್ಟಣೆ ಮುಂದುವರಿದಿದೆ.
ಸಾರ್ವಜನಿಕ ದರ್ಶನದ ಐದನೇ ದಿನವಾದ ಮಂಗಳವಾರವೂ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸಿದ್ದಾರೆ. ಮುಂಜಾನೆಯಿಂದಲೇ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ದರ್ಶನಕ್ಕಾಗಿ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ.
ಧರ್ಮದರ್ಶನದ ಸರದಿಯಲ್ಲಿ ನಿಂತಿರುವ ಭಕ್ತರು ಕಿಲೋಮೀಟರ್ಗಟ್ಟಲೆ ದೂರ ಕಾಯುವಂತಾಗಿದೆ. ಬೆಳಗ್ಗಿನಿಂದಲೇ ಸರತಿ ಸಾಲುಗಳು ಭಕ್ತರಿಂದ ತುಂಬಿದ್ದು, ಸಮಯ ಕಳೆದಂತೆ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿದೆ.
ಇನ್ನು ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ನಾಲ್ಕು ದಿನಗಳ ಅವಧಿಯಲ್ಲೇ ಎಂಟು ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಐದನೇ ದಿನವೂ ಭಕ್ತರ ಆಗಮನ ಮುಂದುವರಿದಿದ್ದು, ದೇವಸ್ಥಾನದ ಸುತ್ತಮುತ್ತ ಭಕ್ತಿಯ ಸಂಭ್ರಮ ಮನೆಮಾಡಿದೆ.









