ಉಡುಪಿ: ಎರಡು ಟಿಪ್ಪರ್ ಲಾರಿಗಳ ನಡುವಿನ ಡಿಕ್ಕಿಯಿಂದ ನಿಯಂತ್ರಣ ತಪ್ಪಿದ ಲಾರಿಯೊಂದು ಸ್ಕೂಟರ್ಗೆ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳ್ಳೂರಿನಲ್ಲಿ ಅಕ್ಟೋಬರ್ 30ರಂದು ಈ ಅಪಘಾತ ಸಂಭವಿಸಿತ್ತು.
ಮೃತರನ್ನು ಕಂಡ್ಲೂರು ನಿವಾಸಿ, ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಟಿ.ಕೆ. ಮೊಹಮ್ಮದ್ ಶಾಯನ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಕೂಟರ್ನಲ್ಲಿ ಹಿಂಬದಿ ಸವಾರನಾಗಿದ್ದ ಮೊಹಮ್ಮದ್ ರಾಯನ್ ಕೂಡ ಗಾಯಗೊಂಡಿದ್ದಾರೆ.
ಬಳ್ಳೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ರಾಜ್ಯ ಹೆದ್ದಾರಿ 52ರಲ್ಲಿ ಈ ದುರ್ಘಟನೆ ನಡೆದಿತ್ತು. ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳು ಕುಂದಾಪುರ ಕಡೆಯಿಂದ ಬರುತ್ತಿದ್ದವು. ಮುಂದೆ ಕೆಎಸ್ಆರ್ಟಿಸಿ ಬಸ್ ಸಾಗುತ್ತಿದ್ದ ಕಾರಣ ಮೊದಲ ಟಿಪ್ಪರ್ ಚಾಲಕ ವೇಗ ಕಡಿಮೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಮತ್ತೊಂದು ಟಿಪ್ಪರ್ ಮೊದಲ ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಎರಡನೇ ಟಿಪ್ಪರ್ ನಿಯಂತ್ರಣ ತಪ್ಪಿದ್ದು, ಚಾಲಕ ವಾಹನವನ್ನು ರಸ್ತೆಯ ಬಲಭಾಗಕ್ಕೆ ತಿರುಗಿಸಿದ್ದಾನೆ. ಇದೇ ವೇಳೆ ಕಂಡ್ಲೂರು ಕಡೆಯಿಂದ ಬಸೂರು ಕಡೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಸ್ಕೂಟರ್ಗೆ ಟಿಪ್ಪರ್ ಅಪ್ಪಳಿಸಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ಪರವಾನಗಿ ಇಲ್ಲದೆ ಮಣ್ಣು ಸಾಗಾಟ:
ಅಪಘಾತದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಟಿಪ್ಪರ್ ಅಗತ್ಯ ಪರವಾನಗಿ ಇಲ್ಲದೆ ಮಣ್ಣು ಸಾಗಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಮತ್ತು ಅಕ್ರಮ ಮಣ್ಣು ಸಾಗಾಟಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕರಾದ ನಾಗರಾಜ್, ಋತ್ವಿಜ್ ಹಾಗೂ ಮಣ್ಣು ತೆಗೆದ ಜಾಗದ ಮಾಲೀಕ ಅಜಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.









