ರಾಮನಗರ: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿ, ಪ್ರಸ್ತುತ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರಂತಹ ದೊಡ್ಡ ವ್ಯಕ್ತಿಗಳು ಇಂತಹ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ವ್ಯಂಗ್ಯವಾಡಿರುವ ಅವರು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕೃಷ್ಣ, ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪವಾಗಿರುವ ಕುರಿತು ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ತನಿಖೆಗೆ ಸಹಕಾರ ನೀಡಿದರೆ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಸತ್ಯ ಹೊರಬರಲಿದೆ. ಇದರಿಂದ ಅವರ ಮೇಲಿರುವ ಅನುಮಾನಗಳೂ ದೂರವಾಗಲಿವೆ ಎಂದು ಹೇಳಿದ್ದಾರೆ.
“ಎರಡು ಬಾರಿ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವರಾಗಿರುವ ದೊಡ್ಡ ವ್ಯಕ್ತಿಗಳು ಇಂತಹ ಅಸಹ್ಯ ಕೆಲಸಕ್ಕೆ ಕೈಹಾಕುವುದಿಲ್ಲ. ಆದ್ದರಿಂದ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಕುಮಾರಸ್ವಾಮಿ ತನಿಖೆಗೆ ಸಹಕಾರ ನೀಡಿದರೆ ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಅವರ ಮೇಲಿರುವ ಕಳಂಕವೂ ದೂರವಾಗುತ್ತದೆ” ಎಂದು ಬಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಚಟುವಟಿಕೆಗಳು ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆದಿವೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಪಾಪ ಕುಮಾರಣ್ಣನಿಗೆ ಈ ವಿಚಾರ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಒಟ್ಟಿನಲ್ಲಿ ಅವರ ಮನೆಯಲ್ಲಿ ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಬಹುಶಃ ಈ ವಿಚಾರ ಅವರ ಗಮನಕ್ಕೆ ಬಂದಿಲ್ಲ ಅನಿಸುತ್ತದೆ. ಅವರ ಮನೆಯಲ್ಲಿರುವ ಯಾರೋ ಈ ಕೆಲಸ ಮಾಡಿರಬಹುದು” ಎಂದು ಹೇಳಿದ್ದಾರೆ.
ಇದೇ ವೇಳೆ ಪೊಲೀಸ್ ಅಧಿಕಾರಿಗಳಿಗೆ ಕುಮಾರಸ್ವಾಮಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ ಬಾಲಕೃಷ್ಣ, ಇಂತಹ ಬೆದರಿಕೆಗಳಿಗೆ ಅಧಿಕಾರಿಗಳು ಹೆದರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಹಾಸನ ಜಿಲ್ಲಾಧಿಕಾರಿಗೆ ಕುಮಾರಸ್ವಾಮಿ ಬೆದರಿಕೆ ಹಾಕಿದ್ದರು. ಆದರೆ ಆ ಅಧಿಕಾರಿ ಸೂಕ್ತ ರೀತಿಯಲ್ಲಿ ಉತ್ತರ ನೀಡಿದ್ದರು ಎಂದು ಹೇಳಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರ ಹೇಳಿಕೆಗೆ ಸಂಬಂಧಿಸಿದಂತೆಯೂ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಆಯುಕ್ತರು ತನಿಖೆಯಲ್ಲಿ ತಿಳಿದುಬಂದಿರುವ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಿದ್ದಾರೆ. ಅವರ ಹೇಳಿಕೆ ತಪ್ಪಾಗಿದೆ ಎಂದು ಕುಮಾರಸ್ವಾಮಿ ಭಾವಿಸಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಅದನ್ನು ಬಿಟ್ಟು ಅಧಿಕಾರಿಗಳಿಗೆ ಬೆದರಿಕೆ ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದ್ದಾರೆ.
“ಪೊಲೀಸ್ ಕಮಿಷನರ್ ಹೇಳಿರುವುದು ತಪ್ಪಾಗಿದ್ದರೆ ಕೋರ್ಟ್ನಲ್ಲಿ ಚಾಲೆಂಜ್ ಮಾಡಲಿ. ಸುಮ್ಮನೆ ಧಮ್ಕಿ ಹಾಕಿದರೆ ಯಾರೂ ಹೆದರುವುದಿಲ್ಲ. ಕಮಿಷನರ್ ಅವರನ್ನು ಗಲ್ಲಿಗೇರಿಸಿ ಬಿಡುತ್ತಾರಾ?” ಎಂದು ಬಾಲಕೃಷ್ಣ ಪ್ರಶ್ನಿಸಿದ್ದಾರೆ.







