ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿದೆ ಎಂದು ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ. ಕೆಲವು ಪೆಟ್ರೋಲ್ ಮಾದರಿಗಳಲ್ಲಿ ಶೇ.31.02ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂದು ಹೇಳಿರುವ ಅವರು, ಪ್ರಯೋಗಾಲಯ ಪರೀಕ್ಷಾ ವರದಿಗಳನ್ನು ಬಹಿರಂಗಪಡಿಸಿ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಿಜ್ವಾನ್ ಅರ್ಷದ್, ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂಧನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.
63 ಪೆಟ್ರೋಲ್ ಮಾದರಿಗಳ ಸಂಗ್ರಹ, 5ರಲ್ಲಿ ಹೆಚ್ಚುವರಿ ಎಥೆನಾಲ್!
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣದ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದ ರಾಜ್ಯದ ವಿವಿಧ ಪೆಟ್ರೋಲ್ ಬಂಕ್ಗಳಿಂದ ಒಟ್ಟು 63 ಇಂಧನ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಆರಂಭದಲ್ಲಿ ಇ-20 ಇಂಧನದ ಪರೀಕ್ಷೆಗಾಗಿ ಈ ಮಾದರಿಗಳನ್ನು ತೈಲ ಮಾರುಕಟ್ಟೆ ಕಂಪನಿಗಳ ಅಧಿಕೃತ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಆದರೆ ಎಥೆನಾಲ್ ಪ್ರಮಾಣದ ಕುರಿತು ನಿಖರ ಮಾಹಿತಿ ನೀಡಲು ಹಿಂದೇಟು ಹಾಕಲಾಯಿತು ಎಂದು ರಿಜ್ವಾನ್ ಅರ್ಷದ್ ಆರೋಪಿಸಿದರು.
ಬಳಿಕ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಕ್ಕೆ ಏಳು ಮಾದರಿಗಳನ್ನು ಕಳುಹಿಸಲಾಗಿತ್ತು. ಈ ಪೈಕಿ ಐದು ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಅಂಶ ಪತ್ತೆಯಾಗಿದೆ. ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ.31.02ರಷ್ಟಿದೆ ಎಂದು ಪರೀಕ್ಷಾ ವರದಿಗಳನ್ನು ಉಲ್ಲೇಖಿಸಿ ತಿಳಿಸಿದರು.
ವಾಹನಗಳ ಮೈಲೇಜ್ ಮತ್ತು ದಕ್ಷತೆಗೆ ಹೊಡೆತ ಬೀಳುತ್ತಿದೆ ಎಂಬ ಆರೋಪ
ದೇಶದಲ್ಲಿ ಸುಮಾರು 35 ಕೋಟಿ ವಾಹನಗಳು ಸಂಚರಿಸುತ್ತಿದ್ದು, ಅವುಗಳಲ್ಲಿ ಶೇ.99ರಷ್ಟು ವಾಹನಗಳು ಇ-20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನ ಬಳಕೆಗೆ ಸೂಕ್ತವಾಗಿ ವಿನ್ಯಾಸಗೊಂಡಿಲ್ಲ ಎಂದು ರಿಜ್ವಾನ್ ಅರ್ಷದ್ ಪ್ರತಿಪಾದಿಸಿದರು.
ಅಲ್ಲದೆ, ಪೆಟ್ರೋಲ್ ಬಂಕ್ಗಳಲ್ಲಿ ಬಳಕೆಯಲ್ಲಿರುವ ಹೆಚ್ಚಿನ ಇಂಧನ ವಿತರಣಾ ಘಟಕಗಳು ಶೇ.15ರಷ್ಟು ಎಥೆನಾಲ್ ಮಿಶ್ರಣಕ್ಕೆ ಮಾತ್ರ ಹೊಂದಿಕೊಳ್ಳುತ್ತವೆ ಎಂದು ಅವರು ಹೇಳಿದರು.
ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುವ ಹಾಗೂ ದುರಸ್ತಿ ವೆಚ್ಚ ಹೆಚ್ಚಾಗುವ ಆತಂಕವಿದೆ ಎಂದು ಅವರು ಆರೋಪಿಸಿದರು.
ತೈಲ ಕಂಪನಿಗಳಿಗೆ ಲಾಭ, ಗ್ರಾಹಕರಿಗೆ ನಷ್ಟ?
ಎಥೆನಾಲ್ ಮಿಶ್ರಣದಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಅದರ ಪ್ರಯೋಜನ ಸಾಮಾನ್ಯ ಗ್ರಾಹಕರಿಗೆ ತಲುಪುತ್ತಿಲ್ಲ ಎಂದು ರಿಜ್ವಾನ್ ಅರ್ಷದ್ ಟೀಕಿಸಿದರು.
ವಾಹನ ಮಾಲೀಕರು ಮೈಲೇಜ್ ಕೊರತೆ ಹಾಗೂ ದುರಸ್ತಿ ವೆಚ್ಚದಿಂದ ಆರ್ಥಿಕ ಹೊರೆ ಅನುಭವಿಸುತ್ತಿದ್ದರೆ, ತೈಲ ಕಂಪನಿಗಳು ಹೆಚ್ಚಿನ ಲಾಭ ಗಳಿಸುತ್ತಿವೆ. ವಾಹನ ತಯಾರಿಕಾ ಕಂಪನಿಗಳೂ ಬಿಡಿಭಾಗಗಳು ಹಾಗೂ ಸರ್ವೀಸ್ ಮೂಲಕ ಶೇ.50ರಷ್ಟು ಲಾಭ ಗಳಿಸುತ್ತಿವೆ ಎಂದು ಅವರು ಆರೋಪಿಸಿದರು.
ಎಥೆನಾಲ್ ಬಳಕೆಯಿಂದ ವಾಹನಗಳ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ನೀತಿ ಆಯೋಗವೂ ಉಲ್ಲೇಖಿಸಿದೆ. ಆದರೆ ಈ ವಿಚಾರದ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳನ್ನು ಕೇಂದ್ರ ಸರ್ಕಾರ ‘ಪೇಯ್ಡ್ ಕ್ಯಾಂಪೇನ್’ ಎಂದು ಕರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಜನರ ಪರ ಧ್ವನಿ ಎತ್ತಲು ಯಾವುದೇ ಭಯವಿಲ್ಲ’
ಪೆಟ್ರೋಲ್ನಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣದ ಕುರಿತು ಪ್ರಯೋಗಾಲಯ ವರದಿಗಳನ್ನು ಬಹಿರಂಗಪಡಿಸಿರುವುದಕ್ಕೆ ತಮಗೆ ಯಾವುದೇ ಭಯವಿಲ್ಲ ಎಂದು ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದರು.
“ಹೆದರಬೇಡಿ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. ಜನರ ಹಿತರಕ್ಷಣೆಗಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ರಾಜಕೀಯ ಹಿನ್ನಡೆಯಾಗುವ ಭಯ ನನಗಿಲ್ಲ. ಜನರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತೇನೆ” ಎಂದು ಹೇಳಿದರು.










