ರಾಮನಗರ: ರಾಜ್ಯ ರಾಜಕಾರಣದಲ್ಲಿ ಮತ್ತೆ ಮಾತಿನ ಸಮರ ಶುರುವಾಗಿದೆ.

ಐದು ವರ್ಷ ಸಂಪೂರ್ಣ ಅಧಿಕಾರ ನೀಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಸಚಿವ ಹೆಚ್.ಸಿ.ಬಾಲಕೃಷ್ಣ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಕೇಳಿದ ತಕ್ಷಣ ಜನರು ಐದು ವರ್ಷ ಅಧಿಕಾರ ಕೊಟ್ಟುಬಿಡುತ್ತಾರಾ? ಅವರ ಪಕ್ಷ 125 ಸ್ಥಾನ ಗೆಲ್ಲುತ್ತದೆಯೇ ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.
ಕನಕಪುರದಲ್ಲಿ ಮಾತನಾಡಿದ ಬಾಲಕೃಷ್ಣ, ಕುಮಾರಸ್ವಾಮಿ ಕಾಂಗ್ರೆಸ್ ಹತ್ತಿರ ಬಂದರೂ ತ್ಯಾಪೆ, ಬಿಜೆಪಿ ಹತ್ತಿರ ಹೋದರೂ ತ್ಯಾಪೆ ಗಿರಾಕಿ. ಅವರಿಗೆ ಅಧಿಕಾರ ಬಿಟ್ಟುಕೊಟ್ಟು ಸುಮ್ಮನಿರಲು ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗುವಂತಹ ಗಂಡಸರು ಇಲ್ಲವೇ ಎಂದು ಪ್ರಶ್ನಿಸಿ ರಾಜಕೀಯ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬರ ಪರಿಹಾರ ವಿಚಾರದಲ್ಲೂ ಹೆಚ್ಡಿಕೆ ವಿರುದ್ಧ ಹರಿಹಾಯ್ದ ಬಾಲಕೃಷ್ಣ, ಕೇಂದ್ರದಿಂದ ರಾಜ್ಯಕ್ಕೆ ಕಾಟಾಚಾರಕ್ಕೆ ಪರಿಹಾರ ಕೇಳಲಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನಾವು ದೆಹಲಿಗೆ ಹೋಗಿ ಉಲ್ಟಾಪಲ್ಟಾ ನಿಂತುಕೊಳ್ಳಬೇಕಾ? ರಾಜ್ಯದಿಂದ ಪೈಲ್ವಾನ್ಗಳನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿದ್ದೀರಲ್ಲ, ಅವರನ್ನೂ ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸಚಿವರು ಬರೀ ಮನರಂಜನೆಗೆ ಇದ್ದಾರಾ? ಪ್ರತಿದಿನ ಬೆಳಗ್ಗೆ ಎದ್ದು ಮಾಧ್ಯಮಗಳಿಗೆ ಮನರಂಜನೆ ನೀಡದಿದ್ದರೆ ಕೆಲವರಿಗೆ ನಿದ್ದೆಯೇ ಬರುವುದಿಲ್ಲ. ರೈತರ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಮಾತನಾಡಲು ಏಕೆ ಆಸಕ್ತಿ ತೋರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇತ್ತ ಎಂಎಲ್ಸಿ ರಾಜೇಂದ್ರ ಅವರ ಹೇಳಿಕೆಯಿಂದಲೂ ಬಾಲಕೃಷ್ಣ ಕೆರಳಿದ್ದಾರೆ. ನಮಗೆ ಬೇಕಾದದ್ದನ್ನೆಲ್ಲ ಮುಖ್ಯಮಂತ್ರಿ ನೀಡಿದ್ದಾರೆ. ಇದಕ್ಕಿಂತ ಹೆಚ್ಚಿಗೆ ಏನು ಬೇಕು? ನಾವು ಪಕ್ಷದ ಹಿತದೃಷ್ಟಿಯಿಂದ ಮಾತನಾಡುತ್ತಿದ್ದೇವೆ. ಆದರೆ ಸ್ವಂತ ಲಾಭದ ಬಗ್ಗೆ ಯೋಚಿಸುವವರಿಗೆ ಹಾಗೆಯೇ ಅನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವ ರಾಜೇಂದ್ರ ಅವರ ಉದ್ದೇಶವೇನು ಎಂದು ಪ್ರಶ್ನಿಸಿರುವ ಬಾಲಕೃಷ್ಣ, ಹಿಂದೆ ದೇವೇಗೌಡರ ಬಗ್ಗೆ ಟೀಕೆ ಮಾಡಿದ್ದವರು ಈಗ ದಿಢೀರ್ ಪ್ರೀತಿ ತೋರಿಸುತ್ತಿರುವುದು ರಾಜಕೀಯ ವ್ಯಭಿಚಾರವಲ್ಲವೇ ಎಂದು ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲ, ತಾವು ಪ್ರಾಮಾಣಿಕವಾಗಿ ಚುನಾವಣೆ ನಡೆಸಿದ್ದಾರೆಯೇ ಎಂಬುದನ್ನು ಶಾಸಕ ಪುಟ್ಟಣ್ಣ ಅವರನ್ನೇ ಕೇಳಲಿ ಎಂದು ಹೇಳಿರುವ ಅವರು, ರಾಜೇಂದ್ರ ಎಲ್ಲೇ ಬರಲಿ, ಅವರ ಮನೆ ದೇವರ ಮುಂದೆ ಬಂದು ಪ್ರಮಾಣ ಮಾಡಲು ಸಿದ್ಧ ಎಂದು ಬಹಿರಂಗ ಸವಾಲು ಹಾಕಿದ್ದಾರೆ.







