ವಾರ್ಸಾ: ಪೋಲೆಂಡ್ನ ಕ್ರಾಕೋವ್ ನಗರದಲ್ಲಿ ಭೀಕರ ಗುಂಡಿನ ದಾಳಿ ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.

15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಿಲಿಟರಿ ಉಡುಪು ಧರಿಸಿದ್ದ 25 ವರ್ಷದ ಯುವಕನೊಬ್ಬ ಕಾರಿನಲ್ಲಿ ಬಂದು ಸಾರ್ವಜನಿಕರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ.
ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಪ್ರವಾಸಿಗರಿಂದ ಸದಾ ತುಂಬಿರುವ ಕ್ರಾಕೋವ್ನ ಮುಖ್ಯ ಮಾರುಕಟ್ಟೆ ಚೌಕದ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲೇ ಕುಳಿತಿದ್ದ ದಾಳಿಕೋರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗುಂಡಿನ ಸದ್ದು ಕೇಳುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಹಲವರು ಸಮೀಪದ ರೆಸ್ಟೋರೆಂಟ್ಗಳು, ಕೆಫೆಗಳು ಹಾಗೂ ಪೊಲೀಸ್ ಠಾಣೆಯೊಳಗೆ ನುಗ್ಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಾಳುಗಳನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಘಟನೆಯ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ದಾಳಿಕೋರನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗುಂಡೇಟು ಬಿದ್ದಿದೆ. ಅಂತಿಮವಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಾಳಿಕೋರನ ಕಾರಿನಲ್ಲಿ ಭಾರಿ ಪ್ರಮಾಣದ ಮಿಲಿಟರಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ತೀವ್ರಗಾಮಿ ಹಾಗೂ ಉಗ್ರ ರಾಷ್ಟ್ರೀಯತಾವಾದಿ ಸಿದ್ಧಾಂತಗಳಿಂದ ಪ್ರೇರಿತನಾಗಿದ್ದ ಎನ್ನಲಾಗಿದೆ. ಇನ್ನು ಆರೋಪಿಯ ಮನೆಯನ್ನು ಪರಿಶೀಲಿಸಿದಾಗ ಆತನ ಕುಟುಂಬದ ಮೂವರು ಸದಸ್ಯರ ಮೃತದೇಹಗಳೂ ಪತ್ತೆಯಾಗಿವೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.










