ನವದೆಹಲಿ: ಕಳೆದ 12 ವರ್ಷಗಳಲ್ಲಿ ದೇಶದ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ವಿಶ್ವಬ್ಯಾಂಕ್ನ ವರದಿಯನ್ನು ಉಲ್ಲೇಖಿಸಿದ ಅವರು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ದೆಹಲಿಯಲ್ಲಿ ನಡೆದ ‘ದೀಪಾವಳಿ ಮಿಲನ್’ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅಭಿವೃದ್ಧಿ ಕಾರ್ಯಗಳು ಮತ್ತು ಸರ್ಕಾರದ ಗುರಿಗಳ ಕುರಿತು ವಿವರಿಸಿದರು.
“ಒಂದು ಕಾಲದಲ್ಲಿ ಕೆಂಪುಕೋಟೆಯಲ್ಲಿ ನಿಂತು ಬಡತನ ನಿರ್ಮೂಲನೆ ಮಾಡುವ ಬಗ್ಗೆ ಭಾಷಣಗಳನ್ನು ಮಾಡಲಾಗುತ್ತಿತ್ತು. ಆದರೆ ಇಂದು ನಾವು ಬಡತನ ಕಡಿಮೆ ಮಾಡುವಲ್ಲಿ ಮಹತ್ವದ ಪ್ರಗತಿ ಸಾಧಿಸಿದ್ದೇವೆ. ಕಳೆದ 12 ವರ್ಷಗಳಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ” ಎಂದು ಮೋದಿ ಹೇಳಿದರು.
2047ರ ವೇಳೆಗೆ ಭಾರತ ವಿಕಸಿತ ರಾಷ್ಟ್ರವಾಗಬೇಕು ಎಂಬ ಗುರಿಯನ್ನು ಉಲ್ಲೇಖಿಸಿದ ಅವರು, ನಿಗದಿತ ಗಡುವು ಇದ್ದಾಗ ಕೆಲಸದ ಆದ್ಯತೆಗಳು ಬದಲಾಗುತ್ತವೆ. ಗುರಿಯನ್ನು ತಲುಪಲು ನಿರಂತರ ಪ್ರಯತ್ನ ಅಗತ್ಯ ಎಂದು ತಿಳಿಸಿದರು.
ಭಾರತವು ಇಂದು ವಿಶ್ವದ ಮೂರನೇ ಅತಿ ಹೆಚ್ಚು ಸ್ಟಾರ್ಟ್ಅಪ್ಗಳನ್ನು ಹೊಂದಿರುವ ದೇಶವಾಗಿದೆ. ಅತಿದೊಡ್ಡ ರಿಯಲ್ಟೈಮ್ ಪಾವತಿ ವ್ಯವಸ್ಥೆಯನ್ನೂ ಹೊಂದಿದೆ. ಮೂರು ಕೋಟಿ ‘ಲಖ್ಪತಿ ದೀದಿ’ಗಳನ್ನು ರೂಪಿಸುವ ಗುರಿ ಸಾಧಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಶೌಚಾಲಯ ನಿರ್ಮಾಣ, ಎಲ್ಪಿಜಿ ಸಂಪರ್ಕ ವಿತರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಗದಿಪಡಿಸಿದ್ದ ಗುರಿಗಳನ್ನು ತಲುಪಲಾಗಿದೆ. ನಾಲ್ಕು ಪಥದ ರಸ್ತೆಗಳು ಒಂದು ಕಾಲದಲ್ಲಿ ಕನಸಿನ ಮಾತಾಗಿದ್ದವು. ಆದರೆ ಈಗ ಹೈಸ್ಪೀಡ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರೈಲ್ವೆ ವಿದ್ಯುದೀಕರಣ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
2014ರ ವೇಳೆಗೆ ರೈಲ್ವೆ ವಿದ್ಯುದೀಕರಣ ಕಾಮಗಾರಿಯ ಶೇ.30ರಷ್ಟು ಮಾತ್ರ ಪೂರ್ಣಗೊಂಡಿತ್ತು. ಆದರೆ ಕಳೆದ 12 ವರ್ಷಗಳಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಮೋದಿ ತಿಳಿಸಿದರು.
ವಿಶ್ವಬ್ಯಾಂಕ್ ವರದಿಯಲ್ಲಿ ಏನಿದೆ?
ವಿಶ್ವಬ್ಯಾಂಕ್ನ 2026ರ ಅಕ್ಟೋಬರ್ನ ‘ಪಾವರ್ಟಿ ಆ್ಯಂಡ್ ಇಕ್ವಿಟಿ ಬ್ರೀಫ್’ ವರದಿಯ ಪ್ರಕಾರ, 2011ರಿಂದ 2023ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಸುಮಾರು 49.6 ಕೋಟಿ ಜನರು ಕೆಳ-ಮಧ್ಯಮ ಆದಾಯದ ದೇಶಗಳಿಗೆ ಅನ್ವಯಿಸುವ ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇದೇ ಅವಧಿಯಲ್ಲಿ ಭಾರತದಲ್ಲಿನ ತೀವ್ರ ಬಡತನದ ಪ್ರಮಾಣ ಶೇ.27.1ರಿಂದ ಶೇ.2.6ಕ್ಕೆ ಇಳಿಕೆಯಾಗಿದೆ ಎಂದು ವರದಿ ದಾಖಲಿಸಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, 49.6 ಕೋಟಿ ಜನರ ಅಂಕಿಅಂಶವು ದಿನಕ್ಕೆ 4.20 ಡಾಲರ್ ಆದಾಯದ ಬಡತನ ರೇಖೆಯನ್ನು ಆಧರಿಸಿದೆ. ತೀವ್ರ ಬಡತನದ ಪ್ರಮಾಣವನ್ನು ದಿನಕ್ಕೆ 3 ಡಾಲರ್ ಆದಾಯದ ಮಾನದಂಡದ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಈ ಎರಡೂ ಮಾನದಂಡಗಳು 2021ರ ಖರೀದಿ ಶಕ್ತಿ ಸಮಾನತೆ (ಪರ್ಚೇಸಿಂಗ್ ಪವರ್ ಪ್ಯಾರಿಟಿ – ಪಿಪಿಪಿ) ಆಧರಿಸಿವೆ.
ಈ ಅಂಕಿಅಂಶಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಳೆದ 12 ವರ್ಷಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಮುಂದುವರಿಸಿದರೆ ಮುಂದಿನ ಎರಡು ದಶಕಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.







