ಬೆಂಗಳೂರು: ಭಾರತೀಯರ ಅಡುಗೆಮನೆ ಹಾಗೂ ಮನೆಮದ್ದಿನ ಸಂಪ್ರದಾಯದಲ್ಲಿ ಶತಮಾನಗಳಿಂದ ಪ್ರಮುಖ ಸ್ಥಾನ ಪಡೆದಿರುವ ಅರಿಶಿನಕ್ಕೆ ಇದೀಗ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುಷ್ ಮತ್ತು ಗಿಡಮೂಲಿಕೆ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಬೆಳವಣಿಗೆಯ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಭಾರತದ ಆಯುಷ್ ಮತ್ತು ಗಿಡಮೂಲಿಕೆ ಉತ್ಪನ್ನಗಳ ರಫ್ತು ನಿರಂತರವಾಗಿ ಹೆಚ್ಚುತ್ತಿದೆ. ಆಯುಷ್ ಕ್ಷೇತ್ರಕ್ಕೆ ಸಂಬಂಧಿಸಿದ ಆರ್ಥಿಕತೆಯೂ ನೂರಾರು ಶತಕೋಟಿ ರೂಪಾಯಿಗಳ ಮಟ್ಟಕ್ಕೆ ಬೆಳೆದಿದೆ. ಭಾರತೀಯ ಕುಟುಂಬಗಳು ತಲೆಮಾರುಗಳಿಂದ ಆಹಾರ ಮತ್ತು ಮನೆಮದ್ದಿನಲ್ಲಿ ಬಳಸಿಕೊಂಡು ಬಂದಿರುವ ಅರಿಶಿನಕ್ಕೂ ಈಗ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ಇನ್ನು ಜಾಗತಿಕ ಮಟ್ಟದಲ್ಲಿ ಆಯುರ್ವೇದದ ವಿಸ್ತರಣೆಯ ಬಗ್ಗೆಯೂ ಮಾತನಾಡಿದ ಮೋದಿ, ವಿವಿಧ ದೇಶಗಳಲ್ಲಿ 150ಕ್ಕೂ ಹೆಚ್ಚು ಆಯುರ್ವೇದ ತರಬೇತಿ ಕೋರ್ಸ್ಗಳಿಗೆ ಮಾನ್ಯತೆ ದೊರೆತಿದೆ. ಆಯುರ್ವೇದದ ಅಭಿವೃದ್ಧಿ ಮತ್ತು ಪ್ರಚಾರಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ 28 ರಾಷ್ಟ್ರಗಳೊಂದಿಗೆ ಭಾರತ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಸಮಗ್ರ ಆರೋಗ್ಯ ರಕ್ಷಣೆ ಜಾಗತಿಕ ಆಂದೋಲನವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯಲ್ಲಿ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಯೋಗದ ಜಾಗತಿಕ ಜನಪ್ರಿಯತೆಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, ವಿಶ್ವದ ಹಲವು ಪ್ರಮುಖ ನಾಯಕರ ಕುಟುಂಬಗಳಲ್ಲಿಯೂ ಯೋಗದೊಂದಿಗೆ ನಂಟು ಹೊಂದಿರುವವರು ಇದ್ದಾರೆ. ಯೋಗದ ಮೂಲಕ ಭಾರತ ಜಗತ್ತಿನಾದ್ಯಂತ ತನ್ನ ಪ್ರಭಾವವನ್ನು ವಿಸ್ತರಿಸಿದೆ. ಭಾರತವನ್ನು ಅರ್ಥಮಾಡಿಕೊಳ್ಳಲು ಯೋಗ ಒಂದು ಹೆಬ್ಬಾಗಿಲಿನಂತಾಗಿದೆ ಎಂದು ಹೇಳಿದರು.
ಆಧುನಿಕ ವಿಜ್ಞಾನವನ್ನು ಭಾರತದ ಆಧ್ಯಾತ್ಮಿಕ ಜ್ಞಾನ ಪರಂಪರೆಯೊಂದಿಗೆ ಬೆಸೆಯುವ ಪ್ರಶಾಂತಿ ಕುಟೀರದ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಕರ್ನಾಟಕದ ನೆಲ ಶತಮಾನಗಳಿಂದಲೂ ಯೋಗ ಪರಂಪರೆಯ ಪ್ರಮುಖ ಕೇಂದ್ರವಾಗಿದೆ. ಅನೇಕ ಆಚಾರ್ಯರು ಮತ್ತು ವಿದ್ವಾಂಸರು ಈ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರನ್ನೂ ಪ್ರಧಾನಿ ಮೋದಿ ನೆನಪಿಸಿಕೊಂಡರು. ಕಲಾ ಕ್ಷೇತ್ರದ ಜತೆಗೆ ಯೋಗದೊಂದಿಗೂ ನಂಟು ಹೊಂದಿದ್ದ ಡಾ. ರಾಜ್ಕುಮಾರ್ ಅವರ ಕೊಡುಗೆಯನ್ನು ಸ್ಮರಿಸಿದರು.
ಪ್ರಶಾಂತಿ ಕುಟೀರದ ಐದು ದಶಕಗಳ ಪಯಣವನ್ನು ಸೇವೆ ಮತ್ತು ಸಮರ್ಪಣೆಯ ಅಸಾಧಾರಣ ಕಥೆ ಎಂದು ಬಣ್ಣಿಸಿದ ಮೋದಿ, ಒಂದು ಸಣ್ಣ ಯೋಗ ಕೇಂದ್ರವಾಗಿ ಆರಂಭವಾದ ಸಂಸ್ಥೆ ಇಂದು ದೊಡ್ಡ ಆಂದೋಲನವಾಗಿ ಬೆಳೆದಿರುವುದು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.










