ದಾವಣಗೆರೆ: ಮದ್ಯ ಸೇವಿಸಲು ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಹೆತ್ತ ತಾಯಿಯನ್ನೇ ಮಗ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. 70 ವರ್ಷದ ಬುಳ್ಳಮ್ಮ ಮಗನಿಂದಲೇ ಕೊಲೆಯಾದ ದುರ್ದೈವಿ. ಹನುಮಂತಪ್ಪ (35) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಬುಳ್ಳಮ್ಮ ಅವರಿಗೆ ಒಟ್ಟು ಹತ್ತು ಮಕ್ಕಳು. ಪತಿ ಮೃತಪಟ್ಟ ಬಳಿಕ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದ ಅವರು, ಒಂಬತ್ತು ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದರು. ಮಗ ಹನುಮಂತನ ಮೇಲೆ ಅಪಾರ ಪ್ರೀತಿ ಹೊಂದಿದ್ದ ತಾಯಿಗೆ ಕೊನೆಗೆ ಅದೇ ಮಗನಿಂದ ದುರಂತ ಅಂತ್ಯ ಎದುರಾಗಿದೆ.
ಹನುಮಂತ ಈ ಹಿಂದೆ ಹಣದ ವಿಚಾರವಾಗಿ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಎನ್ನಲಾಗಿದೆ. ಮಗ ಜೈಲಿಗೆ ಹೋಗಿದ್ದರಿಂದ ತೀವ್ರವಾಗಿ ನೊಂದಿದ್ದ ಬುಳ್ಳಮ್ಮ ಹಾಸಿಗೆ ಹಿಡಿದಿದ್ದರು. ಬಳಿಕ ಅವರ ಒಂಬತ್ತು ಹೆಣ್ಣುಮಕ್ಕಳು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ, ಮೂರು ತಿಂಗಳ ಹಿಂದೆ ಹನುಮಂತನನ್ನು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಕರೆತಂದಿದ್ದರು.
ಇದಾದ ಬಳಿಕ ಹನುಮಂತ ದಾವಣಗೆರೆಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಬುಳ್ಳಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು. ಮಗನನ್ನು ನೋಡಬೇಕು ಎಂಬ ಆಸೆಯಿಂದ ಎರಡು ದಿನಗಳ ಹಿಂದೆ ತಾವೇ ಹನುಮಂತನನ್ನು ಮನೆಗೆ ಕರೆಸಿಕೊಂಡಿದ್ದರು. ಘಟನೆ ನಡೆದ ರಾತ್ರಿ ಅಕ್ಕನ ಮನೆಯಲ್ಲಿ ಚಿಕನ್ ಸಾರು ಮತ್ತು ರೊಟ್ಟಿ ಊಟ ಮಾಡಿದ ಹನುಮಂತ, ತಾಯಿಯನ್ನು ಮಾತನಾಡಿಸಿಕೊಂಡು ಬರುವುದಾಗಿ ಹೇಳಿ ತೆರಳಿದ್ದ.
ಈ ನಡುವೆ ಎರಡು ದಿನಗಳ ಹಿಂದೆ ಬುಳ್ಳಮ್ಮ ತಮ್ಮ ಬಳಿ ಸುಮಾರು 6 ಸಾವಿರ ರೂಪಾಯಿ ಹಣ ಇಟ್ಟುಕೊಂಡಿರುವ ವಿಚಾರ ಹನುಮಂತನಿಗೆ ತಿಳಿದಿತ್ತು. ವಿಪರೀತ ಮದ್ಯಪಾನ ಮಾಡಿ ತಾಯಿಯ ಬಳಿ ಹಣ ಕೇಳಿದ್ದಾನೆ. ಆದರೆ ಕುಡಿತಕ್ಕೆ ಹಣ ಖರ್ಚು ಮಾಡುತ್ತಾನೆ ಎಂಬ ಕಾರಣಕ್ಕೆ ಬುಳ್ಳಮ್ಮ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಹನುಮಂತ ದೊಣ್ಣೆಯಿಂದ ತಾಯಿಯ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಬಳಿಕ ಮೃತದೇಹವನ್ನು ಬೆಡ್‌ಶೀಟ್‌ನಿಂದ ಮುಚ್ಚಿ ಸ್ಥಳದಿಂದ ತೆರಳಿದ್ದಾನೆ. ಇತ್ತ ತಾಯಿಯನ್ನು ನೋಡಿಕೊಂಡು ಬರುವುದಾಗಿ ಹೋದ ಹನುಮಂತ ಇನ್ನೂ ವಾಪಸ್ ಬಾರದಿದ್ದರಿಂದ ಅನುಮಾನಗೊಂಡ ಆತನ ಅಕ್ಕ ಶಾರದಮ್ಮ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ತಾಯಿಯ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿದ ಶಾರದಮ್ಮ ಹಾಗೂ ಗ್ರಾಮಸ್ಥರು ಆರೋಪಿ ಹನುಮಂತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಸವಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಮಲ್ಲಮ್ಮ ಚೌಬೇ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










