ಗದಗ: ನಗರದ ಹಿರಿಯ ಉದ್ಯಮಿ ಪ್ರೇಮನಾಥಸಾ ನಾರಾಯಣಸಾ ಕಾಟೀಗರ ಅವರ ಪುತ್ರಿ, ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಪೂಜಾ ಸಂದೀಪ್ ದಾನಿ ಅವರು, ಯುನೈಟೆಡ್ ಕಿಂಗ್ಡಮ್ನ ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್ (ACCA) ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಪೂಜಾ ಅವರು, ಪಿಯುಸಿ ಶಿಕ್ಷಣವನ್ನು ಆದರ್ಶ ಶಿಕ್ಷಣ ಸಮಿತಿಯ ದೇವದತ್ತ ಕುರ್ತಕೋಟಿ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಾಗೂ ಬಿಬಿಎ ಪದವಿಯನ್ನು ನಗರದ ಜೆ.ಟಿ. ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ನಾಡಿನ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಆನಂದ ಎಲ್. ಪೊತ್ನೀಸ್ ಅವರ ಮಾರ್ಗದರ್ಶನದಲ್ಲಿ ಆರ್ಟಿಕಲ್ಶಿಪ್ ಪೂರ್ಣಗೊಳಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿ ನಿರ್ವಹಿಸುತ್ತಿರುವ ಪೂಜಾ ಅವರ ಪತಿಯೂ ಇದೇ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪೂಜಾ ದಾನಿ ಅವರ ಈ ಸಾಧನೆಗೆ ಎಸ್.ಎಸ್.ಕೆ. ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಭಾಂಡಗೆ, ಉದ್ಯಮಿ ಈಶ್ವರಸಾ ಮೆಹರವಾಡೆ, ಬಿ.ಎಚ್. ಲದವಾ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.










