ತುಮಕೂರು: ಮುಖ್ಯಮಂತ್ರಿ ಹುದ್ದೆ ಹಲವು ಬಾರಿ ಕೈಗೆಟುಕುವ ಹಂತಕ್ಕೆ ಬಂದು ತಪ್ಪಿಹೋಗಿದೆ ಎಂಬ ಬೇಸರವನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ನಡೆದ ಎಲ್‌ಇಡಿ ಪರದೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದ ಏಳುಬೀಳುಗಳನ್ನು ಮೆಲುಕು ಹಾಕಿದರು.
ತಮ್ಮ 40 ವರ್ಷಗಳ ರಾಜಕೀಯ ಪಯಣದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಅನೇಕ ಬಾರಿ ಉನ್ನತ ಹುದ್ದೆಗಳು ಹತ್ತಿರ ಬಂದು ಕೈತಪ್ಪಿವೆ. ಆದರೂ ರಾಜಕೀಯ ಜೀವನದಲ್ಲಿ ಜನರ ಆಶೀರ್ವಾದದಿಂದ ಹಲವು ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಾಗಿದೆ ಎಂದು ಪರಮೇಶ್ವರ್ ಹೇಳಿದರು.
1989ರಲ್ಲಿ ಇದೇ ಜಿಲ್ಲೆಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ರಾಜಕೀಯ ಕ್ಷೇತ್ರ ತಮಗೆ ಹೊಸದಾಗಿತ್ತು. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದ ತಮಗೆ ರಾಜಕಾರಣದ ಅನುಭವ ಕಡಿಮೆಯಿತ್ತು. ಅಲ್ಲಿಂದ ಆರಂಭವಾದ ರಾಜಕೀಯ ಪಯಣದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದೇನೆ ಎಂದು ತಮ್ಮ ಆರಂಭದ ದಿನಗಳನ್ನು ಸ್ಮರಿಸಿದರು.
ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಹಲವು ಖಾತೆಗಳನ್ನು ನಿರ್ವಹಿಸುವ ಮೂಲಕ ಸಚಿವರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದೀಗ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಎರಡನೇ ಬಾರಿಗೆ ಈ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.









