ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡಾನೆ, ವ್ಯಕ್ತಿಯನ್ನು ಕಾಲಿನಿಂದ ತುಳಿದು ಸಾಯಿಸಿದೆ. ಮೃತರನ್ನು ಹಫೀಜುರ್ ರೆಹಮಾನ್ (57) ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳ ಅಂತರದಲ್ಲಿ ಬೇಲೂರು ಭಾಗದಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಮೃತದೇಹವನ್ನು ಬೇಲೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾಡಾನೆ ಹಾವಳಿಗೆ ಮತ್ತೊಂದು ಬಲಿ
ಕಳೆದ ಶನಿವಾರ ಚೌಡನಹಳ್ಳಿ ಗ್ರಾಮದ ಜಯಮ್ಮ ಎಂಬುವವರು ಕಾಡಾನೆ ದಾಳಿಗೆ ಮೃತಪಟ್ಟಿದ್ದರು. ಈ ಘಟನೆ ಬಳಿಕ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತ ಸಂಘಟನೆಗಳು ಹಾಗೂ ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದ್ದರು. ಭಾನುವಾರ ಮಧ್ಯಾಹ್ನದವರೆಗೂ ಜಯಮ್ಮ ಅವರ ಮೃತದೇಹವನ್ನು ಸ್ಥಳದಲ್ಲೇ ಇಟ್ಟು ಪ್ರತಿಭಟನೆ ಮುಂದುವರಿಸಿದ್ದರು.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬೇಲೂರು ಭಾಗದಲ್ಲಿರುವ ಕಾಡಾನೆಗಳನ್ನು ಭದ್ರಾ ಅರಣ್ಯಕ್ಕೆ ಓಡಿಸುವುದಾಗಿ ಸಿಸಿಎಫ್ ಏಡುಕುಂಡಲ ಘೋಷಿಸಿದ್ದರು. ಅಲ್ಲದೆ, ಈ ಕಾರ್ಯಾಚರಣೆಗೆ ಕುಮ್ಮಿ ಆನೆಗಳನ್ನು ಕರೆತರಲು ನಿರ್ಧರಿಸಲಾಗಿತ್ತು. ಸೋಮವಾರ ಬೇಲೂರು ಭಾಗಕ್ಕೆ ಕುಮ್ಮಿ ಆನೆಗಳು ಆಗಮಿಸಲಿದ್ದು, ಮಂಗಳವಾರದಿಂದ ಕಾರ್ಯಾಚರಣೆ ಆರಂಭವಾಗಬೇಕಿತ್ತು ಎನ್ನಲಾಗಿದೆ. ಆದರೆ, ಕಾಡಾನೆ ಹಾವಳಿಗೆ ಜಯಮ್ಮ ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೊಬ್ಬರು ಬಲಿಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಆಸ್ಪತ್ರೆ ಎದುರು ಪ್ರತಿಭಟನೆ, ಅಂಬುಲೆನ್ಸ್ ತಡೆ
ಹಫೀಜುರ್ ರೆಹಮಾನ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಬೇಲೂರು ತಾಲೂಕು ಆಸ್ಪತ್ರೆ ಎದುರು ಜಮಾಯಿಸಿದ್ದಾರೆ. ಮೃತದೇಹವನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯಬೇಕು ಎಂದು ಒತ್ತಾಯಿಸಿ ಅಂಬುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಕೆಲ ಪ್ರತಿಭಟನಾಕಾರರು ಅಂಬುಲೆನ್ಸ್ ಅನ್ನು ತಳ್ಳಿಕೊಂಡೇ ಘಟನಾ ಸ್ಥಳದತ್ತ ತೆರಳಿದ್ದಾರೆ.
ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಲೂರು ಪಟ್ಟಣದಲ್ಲೂ ಪ್ರತಿಭಟನೆ ತೀವ್ರಗೊಂಡಿದ್ದು, ರಸ್ತೆ ತಡೆ ನಡೆಸಲಾಗಿದೆ.
ಟೈರ್ಗೆ ಬೆಂಕಿ, ಪೊಲೀಸರೊಂದಿಗೆ ತಳ್ಳಾಟ
ನಾಗೇನಹಳ್ಳಿ ಗ್ರಾಮದಲ್ಲಿಯೂ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಾಕಾರರು ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ ಸಂಭವಿಸಿದ್ದು, ಅರೇಹಳ್ಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಯೋಗಭರಂ ಅವರ ಕೈಗೆ ಗಾಯವಾಗಿದೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.









