ರಾಮನಗರ: ವಾರಾಂತ್ಯದ ಹಿನ್ನೆಲೆಯಲ್ಲಿ ಟ್ರೆಕ್ಕಿಂಗ್ಗೆಂದು ಬಂದಿದ್ದ ಒಡಿಶಾ ಮೂಲದ ಯೂಟ್ಯೂಬರ್ ಒಬ್ಬರು ದಾರಿ ತಪ್ಪಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸಿಲುಕಿಕೊಂಡ ಘಟನೆ ರಾಮನಗರ ತಾಲೂಕಿನ ಹುಣಸನಹಳ್ಳಿ ಸಮೀಪದ ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ನಡೆದಿದೆ. ಮಾಹಿತಿ ತಿಳಿದ ತಕ್ಷಣ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರೋಪ್ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಒಡಿಶಾ ಮೂಲದ ಬಿಸ್ವಾಜಿತ್ ನಾಥ್ ರಕ್ಷಿಸಲ್ಪಟ್ಟ ಯೂಟ್ಯೂಬರ್. ಇಂದು ಬೆಳಿಗ್ಗೆ ಅವರು ಬೈಕ್ನಲ್ಲಿ ಒಬ್ಬರೇ ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಬಂದಿದ್ದರು. ಬಳಿಕ ಸಾಹಸಮಯ ಟ್ರೆಕ್ಕಿಂಗ್ಗಾಗಿ ಬೆಟ್ಟ ಹತ್ತಿದ್ದರು. ಆದರೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸಾಗುತ್ತಿದ್ದಾಗ ವಾಪಸ್ ಕೆಳಗಿಳಿಯುವ ದಾರಿ ಕಾಣದೆ ಗೊಂದಲಕ್ಕೀಡಾಗಿದ್ದಾರೆ.
ಸಮಯಪ್ರಜ್ಞೆಯಿಂದ 112ಕ್ಕೆ ಕರೆ
ಬೆಟ್ಟದ ಮೇಲೆ ದಾರಿ ತಪ್ಪಿ ಸಂಕಷ್ಟಕ್ಕೆ ಸಿಲುಕಿದ್ದ ಬಿಸ್ವಾಜಿತ್ ನಾಥ್ ತಕ್ಷಣ ಸಮಯಪ್ರಜ್ಞೆ ಮೆರೆದಿದ್ದಾರೆ. ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ತಾವು ಸಿಲುಕಿರುವ ಸ್ಥಳ ಮತ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ದೊರೆಯುತ್ತಿದ್ದಂತೆಯೇ ರಾಮನಗರ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಟ್ಟದ ತಪ್ಪಲಿಗೆ ತೆರಳಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಬಿಸ್ವಾಜಿತ್ ಅವರನ್ನು ಪತ್ತೆಹಚ್ಚಿದ್ದಾರೆ. ನಂತರ ರೋಪ್ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಬೆಟ್ಟದಿಂದ ಕೆಳಗಿಳಿಸಿದ್ದಾರೆ.
ಪೊಲೀಸರಿಂದ ಒಂಟಿ ಟ್ರೆಕ್ಕಿಂಗ್ ಮಾಡದಂತೆ ಎಚ್ಚರಿಕೆ
ರಕ್ಷಿಸಿದ ಬಳಿಕ ಪೊಲೀಸರು ಬಿಸ್ವಾಜಿತ್ ಅವರಿಗೆ ಒಬ್ಬರೇ ಟ್ರೆಕ್ಕಿಂಗ್ಗೆ ಬರುವುದು ಅಪಾಯಕಾರಿ ಎಂದು ಬುದ್ಧಿಮಾತು ಹೇಳಿದ್ದಾರೆ. ಬೆಟ್ಟ ಮತ್ತು ಅರಣ್ಯ ಪ್ರದೇಶಗಳಲ್ಲಿ ದಾರಿ ತಪ್ಪುವ ಸಾಧ್ಯತೆ ಇರುವುದರಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.
ರಕ್ಷಣೆಯ ಬಳಿಕ ಮಾತನಾಡಿದ ಬಿಸ್ವಾಜಿತ್ ನಾಥ್, “ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಬಂದಿದ್ದೆ. ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದ ಬಳಿಕ ದಾರಿ ತಪ್ಪಿಸಿಕೊಂಡೆ. ನಾನು ಸಿಲುಕಿಕೊಂಡಿದ್ದ ಸ್ಥಳದಿಂದ ನಾನೇ ರಕ್ಷಣೆಗೆ ಮುಂದಾಗಿದ್ದರೆ ಜೀವಂತವಾಗಿ ಹಿಂದಿರುಗುವುದು ಕಷ್ಟವಾಗುತ್ತಿತ್ತು.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ನಿರಂತರವಾಗಿ ನನ್ನ ಸಂಪರ್ಕದಲ್ಲಿದ್ದರು. ಅವರ ಸಹಕಾರದಿಂದ ಸುರಕ್ಷಿತವಾಗಿ ಹೊರಬಂದಿದ್ದೇನೆ” ಎಂದು ತಿಳಿಸಿದ್ದಾರೆ. ತಮ್ಮನ್ನು ರಕ್ಷಿಸಿದ ಕರ್ನಾಟಕ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಬಿಸ್ವಾಜಿತ್ ನಾಥ್ ಧನ್ಯವಾದ ಅರ್ಪಿಸಿದ್ದಾರೆ.









