ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆ ಅಂದರೆ ಸಾಕು, ಅಕ್ರಮಗಳ ಆರೋಪಗಳು ನೆನಪಾಗುತ್ತವೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ತನಿಖೆಯ ಬೆನ್ನಲ್ಲೇ ಇದೀಗ ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಯನ್ನೂ ಕೆಪಿಎಸ್ಸಿ ನಡೆಸಿದೆ.
ಆದರೆ, ಈ ಬಾರಿ ಪರೀಕ್ಷೆಯಲ್ಲಿ ಹಿಂದಿನಂತೆ ಇರಲಿಲ್ಲ. ಅಕ್ರಮಗಳಿಗೆ ಕಡಿವಾಣ ಹಾಕಲು ಆಯೋಗ ಹಲವು ಹೊಸ ಪ್ರಯೋಗಗಳನ್ನು ಮಾಡಿದೆ.
ಅಷ್ಟಕ್ಕೂ ಈ ಬಾರಿ ಕೆಪಿಎಸ್ಸಿ ಜಾರಿಗೆ ತಂದ ಹೊಸ ನಿಯಮಗಳೇನು? ಪರೀಕ್ಷೆಗೆ ಎಷ್ಟು ಮಂದಿ ಹಾಜರಾಗಿದ್ದಾರೆ?
ಭಾನುವಾರ ರಾಜ್ಯದ 15 ಜಿಲ್ಲೆಗಳ 345 ಕೇಂದ್ರಗಳಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಯಿತು. ಒಟ್ಟು 1,47,067 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,14,406 ಮಂದಿ ಮಾತ್ರ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಂಡಿದ್ದರು. ಆದರೆ, ಪರೀಕ್ಷೆ ಬರೆದವರು ಕೇವಲ 87,260 ಅಭ್ಯರ್ಥಿಗಳು. ಅಂದರೆ ಶೇ.59ರಷ್ಟು ಹಾಜರಾತಿ ದಾಖಲಾಗಿದೆ. ಇನ್ನುಳಿದ 59,807 ಅಭ್ಯರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಹಾಲ್ ಟಿಕೆಟ್ ಪಡೆದಿದ್ದರೂ 27,146 ಮಂದಿ ಪರೀಕ್ಷೆಗೆ ಬಂದಿಲ್ಲ.
ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ ಹೇಗಿತ್ತು ಗೊತ್ತಾ?
ಅಡಿ ಅಡಿಯಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗಿತ್ತು. ಕೇಂದ್ರಗಳ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪೊಲೀಸರು ಕೂಡ ಕಣ್ಗಾವಲು ಇರಿಸಿದ್ದರು. ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಒಳಗೆ ಕೊಂಡೊಯ್ಯಲು ಅವಕಾಶವಿರಲಿಲ್ಲ. ವಸ್ತ್ರಸಂಹಿತೆಯನ್ನೂ ಕಡ್ಡಾಯಗೊಳಿಸಲಾಗಿತ್ತು.
ಪರೀಕ್ಷಾರ್ಥಿಗಳ ಉಡುಪುಗಳನ್ನೂ ಪರಿಶೀಲನೆ ಮಾಡಲಾಯಿತು. ಪೂರ್ಣತೋಳಿನ ಅಂಗಿ ಧರಿಸಿ ಬಂದಿದ್ದ ಕೆಲ ಅಭ್ಯರ್ಥಿಗಳು ತಮ್ಮ ಅಂಗಿಯ ತೋಳುಗಳನ್ನು ಕತ್ತರಿಸಿಕೊಂಡು ಪರೀಕ್ಷೆ ಬರೆಯಬೇಕಾಯಿತು. ವಿಶೇಷ ಚೇತನ ಅಭ್ಯರ್ಥಿಯೊಬ್ಬರು ಅಂಗಿ ಬದಲಿಗೆ ಬನಿಯನ್ ಧರಿಸಿ ಪರೀಕ್ಷೆ ಬರೆದಿರುವುದು ಕೂಡ ಗಮನ ಸೆಳೆಯಿತು.
ಆದರೆ, ಈ ಬಾರಿಯ ಪರೀಕ್ಷೆಯಲ್ಲಿನ ಪ್ರಮುಖ ಬದಲಾವಣೆ ಇರುವುದು ಒಎಂಆರ್ ಶೀಟ್ನಲ್ಲಿ!
ಸಾಮಾನ್ಯವಾಗಿ ನಾಲ್ಕು ಆಯ್ಕೆಗಳಿರುವ ಒಎಂಆರ್ ಶೀಟ್ನಲ್ಲಿ ಈ ಬಾರಿ ಐದನೇ ಕಾಲಂ ಸೇರಿಸಲಾಗಿದೆ. ಗೊತ್ತಿಲ್ಲದ ಪ್ರಶ್ನೆಗಳಿಗೆ ಈ ಕಾಲಂನಲ್ಲಿ ಉತ್ತರ ಗುರುತಿಸುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಪ್ರಶ್ನೆಯ ಉತ್ತರದ ಜಾಗವನ್ನು ಖಾಲಿ ಬಿಡದಂತೆ ಕ್ರಮ ಕೈಗೊಳ್ಳಲಾಗಿದೆ. ಖಾಲಿ ಉಳಿದ ಜಾಗವನ್ನು ನಂತರ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ತಡೆಯುವುದು ಇದರ ಉದ್ದೇಶ ಎಂದು ತಿಳಿಸಲಾಗಿದೆ.
ಇನ್ನೊಂದು ವಿಶೇಷ ಅಂದರೆ, ಈ ಬಾರಿ ಅಭ್ಯರ್ಥಿಗಳಿಗೆ ಮೂರು ಪ್ರತಿಗಳ ಒಎಂಆರ್ ಶೀಟ್ ನೀಡಲಾಗಿದೆ. ಒಂದು ಪ್ರತಿ ಅಭ್ಯರ್ಥಿಗೆ, ಮತ್ತೊಂದು ಕೆಪಿಎಸ್ಸಿಗೆ ಹಾಗೂ ಮೂರನೇ ಪ್ರತಿಯನ್ನು ಜಿಲ್ಲಾಧಿಕಾರಿಗಳ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗುತ್ತದೆ. ಮುಂದೆ ಉತ್ತರ ಪತ್ರಿಕೆಗಳ ಬಗ್ಗೆ ಯಾವುದೇ ಅನುಮಾನ ಅಥವಾ ಅಕ್ರಮದ ಆರೋಪ ಕೇಳಿಬಂದರೆ ಈ ಪ್ರತಿಗಳನ್ನು ಹೋಲಿಕೆ ಮಾಡಿ ಪರಿಶೀಲಿಸಲು ಅನುಕೂಲವಾಗಲಿದೆ.
ಒಟ್ಟಿನಲ್ಲಿ, ಅಕ್ರಮಗಳ ಆರೋಪಗಳ ನಡುವೆ ನಡೆದ ಕೆಎಎಸ್ ಪರೀಕ್ಷೆಯಲ್ಲಿ ಕೆಪಿಎಸ್ಸಿ ಭದ್ರತೆ, ತಪಾಸಣೆ ಮತ್ತು ಒಎಂಆರ್ ಶೀಟ್ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ಹೊಸ ಪ್ರಯೋಗಗಳು ಪರೀಕ್ಷಾ ಅಕ್ರಮಗಳಿಗೆ ನಿಜವಾಗಿಯೂ ಕಡಿವಾಣ ಹಾಕುತ್ತವೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.










