ವಿಜಯಪುರ: ಕಳೆದ ಒಂದು ತಿಂಗಳಿಂದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ತದ್ದೇವಾಡಿ, ಮಾಣಂಕಲಗಿ ಅಡವಿವಸ್ತಿ ಹಾಗೂ ಮರಗೂರ ಅಡವಿವಸ್ತಿ ಸುತ್ತಮುತ್ತ ಚಿರತೆ ನಿರಂತರವಾಗಿ ಓಡಾಡುತ್ತಿತ್ತು. ಮುಳ್ಳಿನ ಪೊದೆಗಳು ಹಾಗೂ ಕಬ್ಬಿನ ಗದ್ದೆಗಳಲ್ಲಿ ಅಡಗಿಕೊಳ್ಳುತ್ತಿದ್ದ ಚಿರತೆ, ಕಳೆದ ತಿಂಗಳು ಹಲವು ಎಮ್ಮೆ ಕರು ಮತ್ತು ಆಕಳ ಕರುಗಳನ್ನು ಬಲಿ ಪಡೆದಿತ್ತು.
ಚಿರತೆ ಸೆರೆಗೆ ಮುಂದಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಎಮ್ಮೆ ಕರುವನ್ನು ತಿಂದಿದ್ದ ಸ್ಥಳದಲ್ಲೇ ಬೋನ್ ಇರಿಸಿದ್ದರು. ಇಂದು ಮತ್ತೆ ಆಹಾರ ಅರಸಿ ಎಮ್ಮೆ ಕರು ತಿನ್ನಲು ಬಂದ ಚಿರತೆ ಬೋನಿಗೆ ಸೆರೆಯಾಗಿದೆ.
ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಶಿವರುದ್ರಪ್ಪ ಕಬಾಡಗಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದಿದೆ. ಚಿರತೆ ಸೆರೆ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.










