ಬೆಂಗಳೂರು: ‘ಬಸವ ಮಂಟಪ’ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಪ್ರಕರಣ ಕರ್ನಾಟಕಕ್ಕೆ ದೊಡ್ಡ ಅಗೌರವ ಉಂಟುಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಗೌರವಿಸುತ್ತಿದ್ದು, ಅವರ ವಿಚಾರಧಾರೆಗಳನ್ನು ದೇಶದಾದ್ಯಂತ ಪಸರಿಸಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ವಿಚಾರಗಳು ಸಮಾಜದಲ್ಲಿ ವೈಷಮ್ಯ ಮೂಡಿಸುತ್ತಿವೆ ಎಂದು ಅವರು ಆಕ್ಷೇಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬಸವಣ್ಣನವರ ಹೆಜ್ಜೆ ಗುರುತುಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಅವರ ಆದರ್ಶಗಳನ್ನು ಸರ್ಕಾರಗಳು ಅಳವಡಿಸಿಕೊಳ್ಳುತ್ತಿವೆ. ದೆಹಲಿಯಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಲಾಗಿದ್ದು, ಪ್ರತಿಯೊಂದು ಊರು, ಮನೆ, ಶಾಲೆ ಹಾಗೂ ಕಚೇರಿಗಳಲ್ಲಿ ಅವರ ಆಚಾರ-ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಬಸವಣ್ಣನವರ ಆಡಳಿತ, ಭಾವಚಿತ್ರ ಹಾಗೂ ಮಾರ್ಗದರ್ಶನವನ್ನು ಸ್ಮರಿಸಿಕೊಂಡು ಸರ್ಕಾರ ಮುನ್ನಡೆಯುತ್ತಿದೆ. ಆದರೆ, ಇಂತಹ ಮಹಾನ್ ವ್ಯಕ್ತಿತ್ವದ ಬಗ್ಗೆ ಕೆಲವು ಕಿಡಿಗೇಡಿಗಳು ಸಮಾಜದಲ್ಲಿ ವೈಷಮ್ಯ ಮೂಡಿಸುವಂತಹ ವಿಚಾರಗಳನ್ನು ಹರಡುತ್ತಿರುವುದು ಕರ್ನಾಟಕಕ್ಕೆ ದೊಡ್ಡ ಅಗೌರವ ತಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಸಂಪುಟದಲ್ಲಿ ಚರ್ಚೆ: ಪುಸ್ತಕ ಮುಟ್ಟುಗೋಲಿಗೆ ನಿರ್ಧಾರ
‘ಬಸವ ಮಂಟಪ’ ಕೃತಿ ವಿವಾದದ ಕುರಿತು ಸಚಿವ ಸಂಪುಟದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಸಂಪುಟದ ಎಲ್ಲ ಸಹೋದ್ಯೋಗಿಗಳು ಒಕ್ಕೊರಲಿನಿಂದ ನಿರ್ಧಾರ ಕೈಗೊಂಡಿದ್ದು, ಸಚಿವ ಸಂಪುಟದ ಸದಸ್ಯರೆಲ್ಲರೂ ಅದಕ್ಕೆ ಸಹಿ ಹಾಕಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಸಂಬಂಧ ಬಸವ ಸಮಿತಿಯೂ ಸರ್ಕಾರಕ್ಕೆ ಪತ್ರ ಬರೆದಿತ್ತು. ಎಲ್ಲ ಆಯಾಮಗಳನ್ನು ಪರಿಶೀಲಿಸಿದ ಬಳಿಕ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಕೃತಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಪರಿಶೀಲಿಸಿ, ಸರ್ಕಾರದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.
ಶಾಂತಿ ಭಂಗದ ಆತಂಕ: ಮುನ್ನೆಚ್ಚರಿಕೆ ಕ್ರಮ
ಈ ವಿಚಾರವಾಗಿ ವಿವಿಧ ಮುಖಂಡರು ತಮ್ಮೊಂದಿಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಪ್ರತಿಭಟನೆಗಳು ಹೆಚ್ಚಾಗಿ ಶಾಂತಿ ಭಂಗ ಉಂಟಾಗುವ ಸಾಧ್ಯತೆಗಳ ಬಗ್ಗೆ ಆತಂಕವಿತ್ತು. ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಮೊದಲೇ ಸಚಿವ ಸಂಪುಟ ಸಭೆಯಲ್ಲಿ ತಕ್ಷಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
ಲೇಖಕ, ಪ್ರಕಾಶಕರ ವಿರುದ್ಧ ಎಫ್ಐಆರ್
ಬಸವಣ್ಣನವರ ಕುರಿತು ಕೃತಿಯಲ್ಲಿ ಕೆಲವು ಆಕ್ಷೇಪಾರ್ಹ ಬರಹಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಬಸವಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಸವಣ್ಣನವರನ್ನು ಕೃತಿಯಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆಕ್ಷೇಪವಾಗಿದೆ.
ಈ ಸಂಬಂಧ ಲೇಖಕ ರವಿ ಹಂಜ್ ಹಾಗೂ ಕೃತಿಯನ್ನು ಪ್ರಕಟಿಸಿದ ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿವಾದದ ಬೆನ್ನಲ್ಲೇ ಲೇಖಕ ರವಿ ಹಂಜ್ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.









