ಶಿವಮೊಗ್ಗ: ಮದುವೆಯಾಗಿ ಕೇವಲ 45 ದಿನಗಳಷ್ಟೇ ಕಳೆದಿದ್ದ ನವದಂಪತಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಶರಾವತಿ ನಗರದ ನಿವಾಸಿಗಳಾದ ಜಿ. ಕಿರಣ್ (28) ಮತ್ತು ಅವರ ಪತ್ನಿ ಸೌಮ್ಯ (22) ಮೃತಪಟ್ಟ ದುರ್ದೈವಿಗಳು. ಹೊಸ ಜೀವನದ ಕನಸು ಕಾಣುತ್ತಿದ್ದ ದಂಪತಿ ಅಪಘಾತದಲ್ಲಿ ಸಾವನ್ನಪ್ಪಿರುವುದು ಎರಡೂ ಕುಟುಂಬಗಳಲ್ಲಿ ಆಕ್ರಂದನ ಮೂಡಿಸಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಿರಣ್, ಶನಿವಾರ ರಾತ್ರಿ ಪತ್ನಿ ಸೌಮ್ಯ ಅವರೊಂದಿಗೆ ಸ್ಕೂಟಿಯಲ್ಲಿ ಗೋವಿಂದಪುರದಲ್ಲಿರುವ ಅತ್ತೆ ಮನೆಗೆ ತೆರಳುತ್ತಿದ್ದರು. ಈ ವೇಳೆ ಸಾಗರ ರಸ್ತೆ ಸಮೀಪದ ರಿಂಗ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ದಂಪತಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ, ಗಾಯಗಳ ತೀವ್ರತೆಯಿಂದ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮದುವೆಯಾಗಿ ಒಂದೂವರೆ ತಿಂಗಳಷ್ಟೇ ಕಳೆದಿದ್ದರಿಂದ ಎರಡೂ ಕುಟುಂಬಗಳಲ್ಲಿ ಸಂಭ್ರಮ ಮನೆಮಾಡಿತ್ತು. ಆದರೆ, ಕ್ಷಣಾರ್ಧದಲ್ಲಿ ಸಂಭವಿಸಿದ ಅಪಘಾತ ಇಡೀ ಕುಟುಂಬದ ಸಂತಸವನ್ನು ಕಸಿದುಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಪ್ರೀತಿಸಿ ಮದುವೆಯಾಗಿದ್ದ ಕಿರಣ್ ಮತ್ತು ಸೌಮ್ಯ ಸಾವಿನಲ್ಲೂ ಒಂದಾಗಿದ್ದಾರೆ. ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲು ಕಿರಣ್ ಕುಟುಂಬಸ್ಥರು ಮುಂದಾಗಿದ್ದರು. ಆದರೆ, ಸೌಮ್ಯ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸೌಮ್ಯ ಅವರ ಮೃತದೇಹವನ್ನು ತವರು ಮನೆಗೆ ಕೊಂಡೊಯ್ಯಲಾಗಿದೆ. ಹೀಗಾಗಿ ಸಾವಿನಲ್ಲಿ ಒಂದಾದ ನವದಂಪತಿಯ ಅಂತ್ಯಕ್ರಿಯೆ ಮಾತ್ರ ಪ್ರತ್ಯೇಕವಾಗಿ ನಡೆದಿದೆ.
ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಪಘಾತಕ್ಕೀಡಾದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ಬಳಿಕ ಪರಾರಿಯಾಗಿರುವ ಕಾರು ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.









