ಮಂಗಳೂರು: ಉದ್ಯೋಗಕ್ಕಾಗಿ ಇಸ್ರೇಲ್ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರ ಸಾವಿನ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್ (41) ಮೃತಪಟ್ಟವರು. ಕಳೆದ ಒಂದೂವರೆ ವರ್ಷದಿಂದ ಇಸ್ರೇಲ್ನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು, ಆರಂಭದಲ್ಲಿ ಟೆಲ್ ಅವೀವ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನೊಫ್ ಹಗಲಿಲ್ನಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ ಕಂಪನಿಗೆ ಸೇರಿಕೊಂಡಿದ್ದರು.
ಅಕ್ಟೋಬರ್ 16ರಂದು ರಾತ್ರಿ 8:49ಕ್ಕೆ ಶಡ್ರಕ್ ತಮ್ಮ ಪತ್ನಿಗೆ ಕೊನೆಯ ಸಂದೇಶ ಕಳುಹಿಸಿದ್ದರು. ಅದಕ್ಕೂ ಮುನ್ನ ಕುಟುಂಬಸ್ಥರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದರು. ಆದರೆ, ಆ ಬಳಿಕ ಅವರ ಸಂಪರ್ಕ ಕಡಿತಗೊಂಡಿತ್ತು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಅಕ್ಟೋಬರ್ 21ರಂದು ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು.
ಜೊತೆಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಸಂಸದ ಬ್ರಿಜೇಶ್ ಚೌಟ ಹಾಗೂ ಸಚಿವ ಯು.ಟಿ. ಖಾದರ್ ಅವರಿಗೂ ಮನವಿ ಸಲ್ಲಿಸಿ, ಶಡ್ರಕ್ ಪತ್ತೆಗೆ ನೆರವಾಗುವಂತೆ ಕೋರಿದ್ದರು.
ಇದಾದ ಸುಮಾರು ಒಂದು ವಾರದ ಬಳಿಕ ಶಡ್ರಕ್ ಮೃತಪಟ್ಟಿರುವ ಮಾಹಿತಿ ಕುಟುಂಬಸ್ಥರಿಗೆ ಲಭಿಸಿತ್ತು. ಇದೀಗ ಒಂದು ತಿಂಗಳ ಬಳಿಕ ಅವರ ಮೃತದೇಹವನ್ನು ಭಾರತಕ್ಕೆ ರವಾನಿಸಲಾಗಿದ್ದು, ನವೆಂಬರ್ 24ರ ರಾತ್ರಿ ತಾಯ್ನಾಡಿಗೆ ತಲುಪಿದೆ.
ಶಡ್ರಕ್ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಇದು ಸಹಜ ಸಾವಲ್ಲ, ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಇಸ್ರೇಲ್ನಲ್ಲಿ ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಸಾವಿನ ಹಿಂದಿನ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.










