ಭಾರತೀಯ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆಯುತ್ತಿದೆ. ಪ್ರತಿಷ್ಠಿತ 32ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ನ ಶಾರ್ಟ್ಲಿಸ್ಟ್ನಲ್ಲಿ ಈ ಚಿತ್ರ ಸ್ಥಾನ ಪಡೆದುಕೊಂಡಿದೆ. ಅತ್ಯುತ್ತಮ ವಿಜ್ಯುವಲ್ ಎಫೆಕ್ಟ್ಸ್ ಮತ್ತು ಅತ್ಯುತ್ತಮ ಸ್ಟಂಟ್ ಡಿಸೈನ್ ವಿಭಾಗಗಳಲ್ಲಿ ‘ರಾಮಾಯಣ’ ಆಯ್ಕೆಯಾಗಿದ್ದು, ಭಾರತೀಯ ಚಿತ್ರರಂಗದ ಪಾಲಿಗೆ ಇದು ಮಹತ್ವದ ಬೆಳವಣಿಗೆಯಾಗಿದೆ.
ಸುಮಾರು 500ಕ್ಕೂ ಹೆಚ್ಚು ಸಿನಿಮಾ ವಿಮರ್ಶಕರು ಮತ್ತು ಪತ್ರಕರ್ತರನ್ನು ಒಳಗೊಂಡಿರುವ ಕ್ರಿಟಿಕ್ಸ್ ಚಾಯ್ಸ್ ಅಸೋಸಿಯೇಷನ್ ಈ ಶಾರ್ಟ್ಲಿಸ್ಟ್ ಪ್ರಕಟಿಸಿದೆ. ತಾಂತ್ರಿಕ ವಿಭಾಗಗಳ ಒಟ್ಟು 12 ಕೆಟಗರಿಗಳಲ್ಲಿ ಸ್ಪರ್ಧೆಗೆ ಆಯ್ಕೆಯಾದ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ವಿಜ್ಯುವಲ್ ಎಫೆಕ್ಟ್ಸ್ ವಿಭಾಗದಲ್ಲಿ ‘ರಾಮಾಯಣ’ಗೆ ಹಾಲಿವುಡ್ನ ‘ದಿ ಒಡಿಸ್ಸಿ’, ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಮತ್ತು ‘ಗಾಡ್ಜಿಲ್ಲಾ ಮೈನಸ್ ಜೀರೋ’ ಸಿನಿಮಾಗಳಿಂದ ಪೈಪೋಟಿ ಎದುರಾಗಲಿದೆ. ಇನ್ನು ಅತ್ಯುತ್ತಮ ಸ್ಟಂಟ್ ಡಿಸೈನ್ ವಿಭಾಗದಲ್ಲಿ ‘ಡ್ಯೂನ್: ಪಾರ್ಟ್ 3’ ಹಾಗೂ ‘ರೆಸಿಡೆಂಟ್ ಇವಿಲ್’ ಚಿತ್ರಗಳೊಂದಿಗೆ ‘ರಾಮಾಯಣ’ ಸ್ಪರ್ಧಿಸಲಿದೆ.
ಈ ಬಾರಿಯ ತಾಂತ್ರಿಕ ವಿಭಾಗದ ಶಾರ್ಟ್ಲಿಸ್ಟ್ನಲ್ಲಿ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ ಸಿನಿಮಾ ಹೆಚ್ಚಿನ ವಿಭಾಗಗಳಲ್ಲಿ ಸ್ಥಾನ ಪಡೆದಿದೆ. ಒಟ್ಟು 12 ವಿಭಾಗಗಳ ಪೈಕಿ 11 ವಿಭಾಗಗಳಲ್ಲಿ ಈ ಚಿತ್ರ ಆಯ್ಕೆಯಾಗಿದೆ. ‘ಡ್ಯೂನ್: ಪಾರ್ಟ್ 3’ ಮತ್ತು ಸ್ಪ್ಯಾನಿಷ್ ಸಿನಿಮಾ ‘ಲಾ ಬೋಲಾ ನೆಗ್ರಾ’ ತಲಾ ಎಂಟು ವಿಭಾಗಗಳಲ್ಲಿ ಸ್ಥಾನ ಪಡೆದಿವೆ. ‘ಗಾಡ್ಜಿಲ್ಲಾ ಮೈನಸ್ ಜೀರೋ’ ಹಾಗೂ ‘ವೈಲ್ಡ್ವುಡ್’ ಸಿನಿಮಾಗಳು ತಲಾ ಏಳು ವಿಭಾಗಗಳಲ್ಲಿ ಆಯ್ಕೆಯಾಗಿವೆ.
ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗಳನ್ನು ಆಸ್ಕರ್ ಪ್ರಶಸ್ತಿಗಳ ಪ್ರಮುಖ ಮುನ್ಸೂಚಕ ಪ್ರಶಸ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಗೆದ್ದಿದ್ದ ‘ಗ್ಲಾಡಿಯೇಟರ್’ ಮತ್ತು ‘ಪ್ಯಾರಾಸೈಟ್’ ಸಿನಿಮಾಗಳು ಆಸ್ಕರ್ ಪ್ರಶಸ್ತಿಯನ್ನೂ ಗೆದ್ದಿದ್ದವು. ಹೀಗಾಗಿ ಈ ಬಾರಿ ‘ರಾಮಾಯಣ’ ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
ನವೆಂಬರ್ 26ರಿಂದ ಅಂತಿಮ ನಾಮನಿರ್ದೇಶನಕ್ಕಾಗಿ ಮತದಾನ ಆರಂಭವಾಗಲಿದ್ದು, ಡಿಸೆಂಬರ್ 4ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ತಾಂತ್ರಿಕ ವಿಭಾಗಗಳ ಜೊತೆಗೆ ನಟನೆ ಮತ್ತು ಚಿತ್ರಕಥೆ ವಿಭಾಗಗಳಲ್ಲಿಯೂ ‘ರಾಮಾಯಣ’ ನಾಮನಿರ್ದೇಶನಗೊಳ್ಳುವ ನಿರೀಕ್ಷೆಯಿದೆ. 2027ರ ಜನವರಿ 3ರಂದು ಲಾಸ್ ಏಂಜಲೀಸ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇನ್ನು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ದಾಖಲಿಸಿರುವ ‘ರಾಮಾಯಣ’ ಹಳೆಯ ದಾಖಲೆಗಳನ್ನು ಮುರಿಯಲು ಸಾಧ್ಯವಾಗಿಲ್ಲ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಚಿತ್ರವು ಭಾರತದಲ್ಲಿ ಒಟ್ಟು 955.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಆದರೆ ‘ಪುಷ್ಪ 2’ ಚಿತ್ರದ 1,234.10 ಕೋಟಿ ರೂಪಾಯಿ, ‘ಧುರಂಧರ್ 2’ ಚಿತ್ರದ 1,149.30 ಕೋಟಿ ರೂಪಾಯಿ ಹಾಗೂ ‘ಬಾಹುಬಲಿ 2’ ಚಿತ್ರದ 1,030.42 ಕೋಟಿ ರೂಪಾಯಿ ಗಳಿಕೆಯ ದಾಖಲೆಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.









