ಬೆಂಗಳೂರು: ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಬೆನ್ನಲ್ಲೇ ಇದೀಗ ಬಿಸಿಯೂಟ ನೌಕರರ ಹೋರಾಟದ ಬಿಸಿ ರಾಜ್ಯ ಸರ್ಕಾರಕ್ಕೆ ತಟ್ಟಿದೆ. ಕ್ಲಸ್ಟರ್ ಕಿಚನ್ ವ್ಯವಸ್ಥೆಯ ಪ್ರಸ್ತಾಪವನ್ನು ವಿರೋಧಿಸಿ ಹಾಗೂ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಇಂದು ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುವುದಿಲ್ಲ.
ಒಂದೆಡೆ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಬಿಸಿಯೂಟ ಕಾರ್ಯಕರ್ತೆಯರು ಕೂಡ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ತಿಂಗಳಿಗೆ 4 ಸಾವಿರ ರೂಪಾಯಿ ಗೌರವಧನ ಪಡೆಯುತ್ತಿರುವ ನೌಕರರು, ಅದನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಈ ಬೇಡಿಕೆ ಸೇರಿದಂತೆ ಕ್ಲಸ್ಟರ್ ಕಿಚನ್ ಯೋಜನೆಯ ಪ್ರಸ್ತಾಪವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ರಸ್ತೆಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕ್ಲಸ್ಟರ್ ಕಿಚನ್ ವ್ಯವಸ್ಥೆಗೆ ವಿರೋಧ
ಫ್ರೀಡಂ ಪಾರ್ಕ್ನಲ್ಲಿ ನೂರಾರು ಸಂಖ್ಯೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಅಲ್ಪ ಗೌರವಧನಕ್ಕೆ ದುಡಿಯುತ್ತಿದ್ದೇವೆ. ಇದೀಗ ನಮ್ಮ ಉದ್ಯೋಗಕ್ಕೂ ಕುತ್ತು ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾವು ಮನೆಯಲ್ಲಿ ಹೇಗೆ ಊಟ ತಯಾರಿಸುತ್ತೇವೋ ಅದೇ ರೀತಿಯಲ್ಲಿ ಶಾಲಾ ಮಕ್ಕಳಿಗೂ ಅಡುಗೆ ಮಾಡಿ ಊಟ ನೀಡುತ್ತಿದ್ದೇವೆ. ನಮ್ಮ ಕೆಲಸವನ್ನು ಕಿತ್ತು ಎನ್ಜಿಒಗಳು ಹಾಗೂ ಇತರ ಸಂಘಟನೆಗಳಿಗೆ ನೀಡಿ ಕ್ಲಸ್ಟರ್ ಕಿಚನ್ಗಳನ್ನು ನಿರ್ಮಿಸಿದರೆ ನಮ್ಮ ಗತಿ ಏನು? ನಮಗೆ ಬೇರೆ ಯಾರು ಕೆಲಸ ಕೊಡುತ್ತಾರೆ? ನಾವೆಲ್ಲಿಗೆ ಹೋಗಬೇಕು?” ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಉದ್ಯೋಗ ಭದ್ರತೆ ಹಾಗೂ ಗೌರವಧನ ಹೆಚ್ಚಳಕ್ಕೆ ಆಗ್ರಹ
ರಾಜ್ಯಾದ್ಯಂತ ಸುಮಾರು 1.60 ಲಕ್ಷ ಬಿಸಿಯೂಟ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಎಲ್ಲ ನೌಕರರಿಗೂ ಗೌರವಧನ ಹೆಚ್ಚಿಸುವುದರ ಜೊತೆಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
“ನಮಗೆ ಕೆಲಸದ ಭದ್ರತೆ ನೀಡಬೇಕು. ಇಲ್ಲವಾದರೆ ಆಶಾ ಕಾರ್ಯಕರ್ತೆಯರ ಮಾದರಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ” ಎಂದು ಬಿಸಿಯೂಟ ನೌಕರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಗೆ ಬಂದರೆ ತಮ್ಮ ಉದ್ಯೋಗಕ್ಕೆ ತೊಂದರೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿರುವ ಕಾರ್ಯಕರ್ತೆಯರು, ಸರ್ಕಾರ ಕೂಡಲೇ ಈ ಪ್ರಸ್ತಾಪವನ್ನು ಹಿಂಪಡೆಯಬೇಕು ಹಾಗೂ ಗೌರವಧನ ಹೆಚ್ಚಳ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.









