ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಂದ ಸಲ್ಲಿಕೆಯಾಗಿರುವ ಕಾಣಿಕೆ ಹಣದ ಎಣಿಕೆ ಕಾರ್ಯ ಪೂರ್ಣಗೊಂಡಿದೆ.
ದೀಪಾವಳಿ ಜಾತ್ರೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಾದಪ್ಪನ ದರ್ಶನ ಪಡೆದು ಕಾಣಿಕೆ ಅರ್ಪಿಸಿದ್ದು, ಕೇವಲ 27 ದಿನಗಳ ಅವಧಿಯಲ್ಲಿ ಬರೋಬ್ಬರಿ ₹2.50 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ₹2,50,73,817 ನಗದು ಕಾಣಿಕೆ ಸಂಗ್ರಹವಾಗಿದೆ. ಇದರೊಂದಿಗೆ 8 ಗ್ರಾಂ ಚಿನ್ನ ಹಾಗೂ 924 ಗ್ರಾಂ ಬೆಳ್ಳಿಯನ್ನೂ ಭಕ್ತರು ಅರ್ಪಿಸಿದ್ದಾರೆ. ಅಲ್ಲದೆ, ನಾಲ್ಕು ವಿದೇಶಿ ಕರೆನ್ಸಿ ನೋಟುಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿವೆ.
ದೀಪಾವಳಿ ಜಾತ್ರೆಯ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು. ಮಾದಪ್ಪನ ದರ್ಶನ ಪಡೆದು ಭಕ್ತಿಯಿಂದ ಕಾಣಿಕೆ ಸಲ್ಲಿಸಿದ್ದರು. ಹುಂಡಿ ಹಣ ಎಣಿಕೆ ಕಾರ್ಯವನ್ನು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಸಲಾಗಿದೆ.









