ಮುಳಗುಂದದ ಕ್ರೀಡಾ ಕನಸಿಗೆ ಮೂರು ಕೋಟಿ ಬಲ
ವಿಜಯಸಾಕ್ಷಿ ಸುದ್ದಿ, ಮುಳಗುಂದ
ಕ್ರೀಡಾ ಕ್ಷೇತ್ರದಲ್ಲಿ ಮುಳಗುಂದ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹೆಗ್ಗಳಿಕೆ ಮೂಡಿಸಿದೆ. ಇಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಂಟು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ, ಈಜುಕೊಳ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಗದಗ ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮುಳಗುಂದ ಪಟ್ಟಣದ ಕ್ರೀಡಾ ಮೈದಾನದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈಜುಕೊಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಹಾಗೂ ಸೇವಾ ಕ್ಷೇತ್ರಗಳಲ್ಲಿ ಮುಳಗುಂದ ಅನೇಕ ಮಹನೀಯರನ್ನು ನಾಡಿಗೆ ನೀಡಿದೆ. ಅವರ ಸಾಧನೆಗಳು ಇತಿಹಾಸದಲ್ಲಿ ಅಜರಾಮರವಾಗಿವೆ. ಗದಗ ನಗರದಲ್ಲಿ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಹಾಕಿ, ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಅಗತ್ಯವಾದ ಮೈದಾನಗಳನ್ನು ನಿರ್ಮಿಸಲಾಗಿದೆ. ಗದಗ ಕ್ಷೇತ್ರದಲ್ಲಿ ಈಗಾಗಲೇ ಏಳು ಈಜುಕೊಳಗಳನ್ನು ನಿರ್ಮಿಸಲಾಗಿದೆ. ಪಿಕಲ್ಬಾಲ್, ಬಿಲ್ಲುಗಾರಿಕೆ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಉತ್ತೇಜನ ನೀಡುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಸರ್ಕಾರದಿಂದ ಒದಗಿಸುವ ಸೌಲಭ್ಯಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಬೇಕು. 2027ರ ವೇಳೆಗೆ ಮುಳಗುಂದದಲ್ಲಿ ಈಜುಕೊಳ, ಕ್ರೀಡಾಂಗಣ ಹಾಗೂ ಮಕ್ಕಳ ಆಟೋಟಗಳಿಗೆ ಪೂರಕವಾದ ಸುಸಜ್ಜಿತ ಸೌಲಭ್ಯಗಳು ಸಿದ್ಧವಾಗಬೇಕು ಎಂಬ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮುಳಗುಂದ ಗವಿಮಠದ ಅಧ್ಯಕ್ಷರು ಹಾಗೂ ನುರುಘಾ ಮಠದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಶಿಕ್ಷಣ, ಕ್ರೀಡೆ, ಸಂಸ್ಕೃತಿ ಮತ್ತು ಸಂಸ್ಕಾರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅತ್ಯಗತ್ಯ. ಮುಳಗುಂದದಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಲಿ ಎಂದು ಆಶಿಸಿದರು.
ಮುಳಗುಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ವಿಶೇಷ ಕೊಡುಗೆ ನೀಡಿದ ನೆಲವಾಗಿದೆ. ಪಟ್ಟಣದಲ್ಲಿ ಎಂ.ಎಸ್. ಸುಂಕಾಪೂರ ಅವರ ಸ್ಮರಣಾರ್ಥ ಸಂಸ್ಕೃತಿ ಭವನ ನಿರ್ಮಿಸಲು ವಿಶೇಷ ಅನುದಾನ ಒದಗಿಸಲಾಗುವುದು. ಇದರಿಂದ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಅವಕಾಶವಾಗಲಿದೆ. ನಗೆಗಾರ ನಯಸೇನ, ಕೈವಲ್ಯ ಸಾಹಿತ್ಯಕ್ಕೆ ಹಿರಿಮೆ ತಂದ ಬಾಲಲೀಲಾ ಮಹಾಂತ ಶಿವಯೋಗಿಗಳು ಹಾಗೂ ಇಲ್ಲಿನ ಕ್ರೀಡಾ ಪ್ರತಿಭೆಗಳ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಭವನ ನಿರ್ಮಿಸಲಾಗುವುದು ಎಂದು ಎಚ್.ಕೆ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಬಾಲಲೀಲಾ ಮಹಾಂತ ಶಿವಯೋಗಿ ಸೇವಾ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ, ಎಸ್.ಎಂ. ನೀಲಗುಂದ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಖುಲ್ ಜೈನ್, ಷಣ್ಮುಖಪ್ಪ ಬಡ್ನಿ, ಡಾ. ಎಸ್.ಸಿ. ಚವಡಿ, ಬಸವರಾಜ ಬಡ್ನಿ, ಬಿ.ವಿ. ಸುಂಕಾಪೂರ, ಯಲ್ಲವ್ವ ಕವಲೂರ, ಪರಶುರಾಮ ವಂಟಕರ, ನಾಗರಾಜ ದೇಶಪಾಂಡೆ, ಸಿದ್ದು ಪಾಟೀಲ, ಮಹಾಂತೇಶ ನೀಲಗುಂದ, ಮಹದೇವಪ್ಪ ಗಡಾದ, ಕೆ.ಎಲ್. ಕರಿಗೌಡ್ರ, ವಿ.ಎಸ್. ನೀಲಗುಂದ, ಸರ್ಪರಾಜ ಶೇಖ, ಐ.ಎಂ. ಶೇಖ, ಐಶ್ವರ್ಯ ಕರಿಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸ್ವಾಗತಿಸಿದರು. ಆಕಾಶ ಯಲವಿಗಿ ಪ್ರಾರ್ಥಿಸಿದರು. ವರ್ಷಾ ಬಾರಕೇರ ನಿರೂಪಿಸಿದರು.










