ನವದೆಹಲಿ: ಇನ್ಮುಂದೆ ವಿದ್ಯುತ್ ಬಳಕೆಯ ಪ್ರಮಾಣ ಮಾತ್ರವಲ್ಲ, ಅದನ್ನು ಯಾವ ಸಮಯದಲ್ಲಿ ಬಳಸುತ್ತೀರಿ ಎಂಬುದೂ ನಿಮ್ಮ ಬಿಲ್ ಮೊತ್ತವನ್ನು ನಿರ್ಧರಿಸಲಿದೆ.
ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯನ್ನು ಸಮತೋಲನಗೊಳಿಸುವ ಉದ್ದೇಶದಿಂದ ಕೇಂದ್ರ ವಿದ್ಯುತ್ ಸಚಿವಾಲಯವು ಹೊಸ ದರ ನಿಗದಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
‘ಟೈಮ್ ಆಫ್ ದಿ ಡೇ’ (ToD) ಎಂದು ಕರೆಯಲಾಗುವ ಈ ವ್ಯವಸ್ಥೆಯಲ್ಲಿ ದಿನದ ವಿವಿಧ ಸಮಯಗಳಿಗೆ ಅನುಗುಣವಾಗಿ ವಿದ್ಯುತ್ ದರವನ್ನು ನಿಗದಿಪಡಿಸಲಾಗುತ್ತದೆ. ಅಂದರೆ, ವಿದ್ಯುತ್ ಬೇಡಿಕೆ ಹೆಚ್ಚಿರುವ ಅವಧಿಯಲ್ಲಿ ಬಳಕೆ ಮಾಡಿದರೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಅದೇ ರೀತಿ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ವಿದ್ಯುತ್ ಬಳಸಿದರೆ ಕಡಿಮೆ ದರದಲ್ಲಿ ಸೌಲಭ್ಯ ಸಿಗಲಿದೆ.
2027ರಿಂದ ಹೊಸ ವ್ಯವಸ್ಥೆ ಜಾರಿ:
ಈ ಸಂಬಂಧ ಕೇಂದ್ರ ವಿದ್ಯುತ್ ಸಚಿವಾಲಯ ಕರಡು ನಿಯಮಾವಳಿಯನ್ನು ಸಿದ್ಧಪಡಿಸಿದೆ. 2027ರ ಏಪ್ರಿಲ್ 1ರಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 10 ಕಿಲೋವ್ಯಾಟ್ಗಿಂತ ಹೆಚ್ಚಿನ ಗರಿಷ್ಠ ವಿದ್ಯುತ್ ಬೇಡಿಕೆ ಹೊಂದಿರುವ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆ. 2028ರ ಏಪ್ರಿಲ್ 1ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ನಂತರ ಇತರ ಗ್ರಾಹಕರಿಗೂ ಹೊಸ ದರ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ. 2029ರ ಏಪ್ರಿಲ್ 1ರೊಳಗೆ ಬಹುತೇಕ ಎಲ್ಲ ವಿದ್ಯುತ್ ಗ್ರಾಹಕರನ್ನು ಇದರ ವ್ಯಾಪ್ತಿಗೆ ತರಲು ಯೋಜಿಸಲಾಗಿದೆ.
ರೈತರಿಗೆ ಇಲ್ಲ ಹೊಸ ನಿಯಮದ ಬಿಸಿ:
ಹೊಸ ವಿದ್ಯುತ್ ದರ ವ್ಯವಸ್ಥೆಯಿಂದ ಕೃಷಿ ಗ್ರಾಹಕರಿಗೆ ವಿನಾಯಿತಿ ನೀಡಲಾಗಿದೆ. ಉಳಿದ ಗ್ರಾಹಕರಿಗೆ ಯಾವ ಸಮಯದಲ್ಲಿ ಎಷ್ಟು ದರ ವಿಧಿಸಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಆಯಾ ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ವಹಿಸಲಾಗಿದೆ.
ಹೀಗಾಗಿ ಹೊಸ ನಿಯಮ ಜಾರಿಯಾದ ಬಳಿಕ ವಿದ್ಯುತ್ ಬಳಕೆಯ ಸಮಯಕ್ಕೆ ಹೆಚ್ಚಿನ ಮಹತ್ವ ಬರಲಿದೆ. ಕಡಿಮೆ ಬೇಡಿಕೆಯ ಅವಧಿಯಲ್ಲಿ ವಿದ್ಯುತ್ ಬಳಕೆ ಮಾಡುವ ಮೂಲಕ ಗ್ರಾಹಕರು ತಮ್ಮ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವ ಅವಕಾಶವೂ ಇರಲಿದೆ.









