ವಿಜಯಸಾಕ್ಷಿ ಸುದ್ದಿ, ಹಾವೇರಿ
ಇತ್ತೀಚೆಗೆ ಸುರಿದ ಭಾರೀ ಮಳೆಯ ಪರಿಣಾಮವಾಗಿ ಬ್ಯಾಡಗಿ ತಾಲೂಕಿನ ತಡಸ ಗ್ರಾಮದಲ್ಲಿ ಮನೆ ಕುಸಿದುಬಿದ್ದು, ಮನೆಯಲ್ಲಿದ್ದ ವೃದ್ಧೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗ್ರಾಮದ 67 ವರ್ಷದ ಪದ್ಮಮ್ಮ ಪಾಟೀಲ ಮೃತ ದುರ್ದೈವಿಯಾಗಿದ್ದಾರೆ. ಸ್ನಾನಕ್ಕೆಂದು ಸ್ನಾನದ ಕೋಣೆಗೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ವೃದ್ಧೆಯ ಮೈಮೇಲೆ ಗೋಡೆಯ ಮಣ್ಣು, ಮೇಲ್ಛಾವಣಿಗೆ ಹಾಕಿದ್ದ ಕಟ್ಟಿಗೆಯ ತೊಲೆ, ಕಂಬಗಳ ಸಮೇತ ಬಿದ್ದ ಪರಿಣಾಮ, ಪದ್ಮಮ್ಮ ಪಾಟೀಲ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೆಲಸಮಯದವರೆಗೂ ಮನೆಯ ಇತರ ಭಾಗಗಳೂ ಕುಸಿದುಬೀಳುತ್ತಲೇ ಇದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮನೆ ಕುಸಿದು ಬೀಳುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಎಂಥವರೂ ಮರುಗುವಂತಿದೆ. ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.



