ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ಹೈಟೆಕ್ ಭಿಕ್ಷಾಟನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಯಾಣಿಕರಿಂದ ಹಣ ಪಡೆಯಲು ನಾನಾ ರೀತಿಯ ನೆಪ ಹೇಳುತ್ತಿದ್ದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವೊಮ್ಮೆ ಪರ್ಸ್ ಕಳೆದುಹೋಗಿದೆ ಎಂದು ಹಣ ಕೇಳುತ್ತಿದ್ದರೆ, ಮತ್ತೊಮ್ಮೆ ಕಾವಿ ಬಟ್ಟೆ ತೊಟ್ಟು, ಮಾಲೆ ಧರಿಸಿ ಸಾಧುಗಳ ವೇಷದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು ಎನ್ನಲಾಗಿದೆ.
ಬಂಧಿತರನ್ನು ವೆಂಕಟ್ ದಿನೇಶ್ ಕುಮಾರ್ ಹಾಗೂ ಪ್ರತೀಕ್ ಭಾಟಿಯಾ ಎಂದು ಗುರುತಿಸಲಾಗಿದೆ. ದೇವನಹಳ್ಳಿ ಸಮೀಪದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಇಬ್ಬರೂ ಪ್ರಯಾಣಿಕರಿಂದ ಹಣ ಕೇಳುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಕಳೆದ ಎರಡು ದಿನಗಳಿಂದ ಇವರ ಚಟುವಟಿಕೆಗಳನ್ನು ಗಮನಿಸಿದ್ದ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಪ್ರತಿದಿನ ಪ್ರತ್ಯೇಕವಾಗಿ ವಿಮಾನ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಬಳಿ ಹಣ ಕೇಳುತ್ತಿದ್ದರು. ಕೆಲವೊಮ್ಮೆ ಪರ್ಸ್ ಕಳೆದುಹೋಗಿದೆ, ಪರೀಕ್ಷೆಗೆ ಹೋಗಲು ಹಣವಿಲ್ಲ ಎಂದು ಹೇಳುತ್ತಿದ್ದರೆ, ಮತ್ತೊಮ್ಮೆ ಕಾವಿ ಬಟ್ಟೆ ಧರಿಸಿ, ಮಾಲೆ ಹಾಕಿಕೊಂಡು ಸಾಧುಗಳಂತೆ ಕಾಣಿಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ.
ಈ ಹಿಂದೆಯೂ ಇದೇ ರೀತಿಯ ಚಟುವಟಿಕೆಯಲ್ಲಿ ತೊಡಗಿದ್ದಾಗ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ, ಎಚ್ಚರಿಕೆಯ ಹೊರತಾಗಿಯೂ ಮತ್ತೆ ವಿಮಾನ ನಿಲ್ದಾಣಕ್ಕೆ ಬಂದು ಭಿಕ್ಷಾಟನೆಯಲ್ಲಿ ತೊಡಗಿದ್ದರು ಎಂಬ ಆರೋಪವಿದೆ.
ಇದಕ್ಕೂ ಮೊದಲು ಅಕ್ಟೋಬರ್ 10ರಂದು ದೆಹಲಿ ಮೂಲದ ಅಮೀನ್ ಎಂಬ ವ್ಯಕ್ತಿ ವಿಮಾನ ನಿಲ್ದಾಣದಲ್ಲಿ ಪರ್ಸ್ ಕಳೆದುಹೋಗಿದೆ ಎಂದು ಪ್ರಯಾಣಿಕರ ಬಳಿ ಹಣ ಕೇಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆತ ಕ್ಯೂಆರ್ ಕೋಡ್ ತೋರಿಸಿ ಡಿಜಿಟಲ್ ಪಾವತಿ ಮೂಲಕ ಹಣ ನೀಡುವಂತೆ ಕೇಳುತ್ತಿದ್ದ ಎನ್ನಲಾಗಿದೆ. ಈ ವೇಳೆ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಇದೀಗ ಮತ್ತಿಬ್ಬರು ಇದೇ ರೀತಿಯ ಚಟುವಟಿಕೆಯಲ್ಲಿ ತೊಡಗಿರುವ ಆರೋಪದಡಿ ಬಂಧಿತರಾಗಿದ್ದಾರೆ. ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



