HomeGadag Newsಪಗಡೆಯಾಟದ ಮೂಲಕ ವಾರ್ಡ್ ಹಬ್ಬ ಶುರು, 2018ರಲ್ಲಿ ಅಲ್ಲವಾಗಿದ್ದು, 2023ರಲ್ಲಿ ಹೌದಾಗುತ್ತೆ; ಸಿ.ಸಿ.ಪಾಟೀಲ್

ಪಗಡೆಯಾಟದ ಮೂಲಕ ವಾರ್ಡ್ ಹಬ್ಬ ಶುರು, 2018ರಲ್ಲಿ ಅಲ್ಲವಾಗಿದ್ದು, 2023ರಲ್ಲಿ ಹೌದಾಗುತ್ತೆ; ಸಿ.ಸಿ.ಪಾಟೀಲ್

For Dai;y Updates Join Our whatsapp Group

Spread the love

ಅದ್ಧೂರಿ “ಗದಗ ಹಬ್ಬ” ಆರಂಭ; ಮನಸುಗಳನ್ನು ಬೆಸೆಯುತ್ತವೆ ಆಟೋಟಗಳು

ವಿಜಯಸಾಕ್ಷಿ ಸುದ್ದಿ, ಗದಗ

ಮನುಷ್ಯ ಸದಾ ಕ್ರಿಯಾಶೀಲನಾಗಿರುವಂತೆ ಮಾಡುವುದು, ಆರೋಗ್ಯವೃದ್ಧಿಗೆ ಸಹಕಾರಿಯಾಗಿರುವುದು ಕ್ರೀಡೆಗಳು. ಮನಸುಗಳನ್ನು ಬೆಸೆಯುತ್ತವೆ ಈ ಆಟೋಟಗಳು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಬೆಟಗೇರಿ ರಂಗಪ್ಪಜ್ಜನ ಮಠದ ಆವರಣದಲ್ಲಿ ಶನಿವಾರ ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಮೂರನೇ ಅವೃತ್ತಿಯ ಜಿಸಿಎಲ್-2022, ಗದಗ ಹಬ್ಬದ ಭಾಗವಾಗಿ ನಡೆದ ವಾರ್ಡ್ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ-ಮತಗಳನ್ನು ಮರೆತು ಒಂದಾಗಿ ಸುಮಧುರ ಕ್ಷಣಗಳನ್ನು ಕಳೆಯುವಂತೆ ಮಾಡುವ ಗದಗ ಹಬ್ಬವನ್ನು ಸಂಘಟಿಸಿರುವ ಅನಿಲ ಮೆಣಸಿನಕಾಯಿ ಅಭಿನಂದನಾರ್ಹರು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ಚುನಾವಣೆ ಹತ್ತಿರ ಬಂದಿರುವ ಕಾರಣಕ್ಕೆ ಗದಗ ಹಬ್ಬ ಮಾಡಲಾಗುತ್ತಿದೆ ಎಂದು ಕೆಲವರು ಟೀಕೆ ಮಾಡುತ್ತಾರೆ. ಅಂಥ ಆರೋಪ, ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವ, ಕಿವಿಗೊಡುವ ಅಗತ್ಯವಿಲ್ಲ. ಕೋವಿಡ್ ಕಾರಣಕ್ಕೆ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಗದಗ ಹಬ್ಬ ಈ ಬಾರಿ ಯಶಸ್ವಿಯಾಗಿ ಜರುಗಲಿ ಎಂದು ಅವರು ಆಶಿಸಿದರು.

ಯಾವುದು ಹೌದು, ಅದು ಅಲ್ಲ. ಯಾವುದು ಅಲ್ಲ, ಅದು ಹೌದು ಎನ್ನುವುದನ್ನು ಸಾಬೀತು ಮಾಡಿದ ಬೆಟಗೇರಿ ರಂಗಪ್ಪಜ್ಜ, ಈ ಭಾಗದಲ್ಲಿ 2018 ರಲ್ಲಿ ಅಲ್ಲ ಆಗಿದ್ದನ್ನು 2023ರಲ್ಲಿ ಹೌದು ಮಾಡಿ ತೋರಿಸಲಿ ಎನ್ನುವ ಮೂಲಕ 2023ರ ವಿಧಾನಸಭೆ ಚುನಾವಣೆಯಲ್ಲಿ ಅನಿಲ ಮೆಣಸಿನಕಾಯಿ ಬೆಂಬಲಿಸಲು ಮನವಿ ಮಾಡಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ದೇಶದಲ್ಲಿ ಕ್ರೀಡೆಗಳನ್ನು ಯಾರೂ ವೃತ್ತಿಯಾಗಿ ತೆಗೆದುಕೊಳ್ಳುತ್ತಿದ್ದಿಲ್ಲ. ಆದರೆ ಪ್ರಧಾನಿ ಮೋದಿ ಖೇಲೋ ಇಂಡಿಯಾ ಕಾರ್ಯಕ್ರಮ ಘೋಷಣೆ ನಂತರ ಕ್ರೀಡಾಪಟುಗಳಿಗೆ ಅವಕಾಶಗಳು ಸೃಷ್ಟಿಯಾಗಿವೆ. ಕ್ರೀಡೆಯನ್ನು ವೃತ್ತಿಯಾಗಿ ಪರಿಗಣಿಸುತ್ತಿದ್ದಾರೆ. ಅನಿಲ ಮೆಣಸಿನಕಾಯಿ ಸಂಘಟಿಸಿರುವ ಈ ಕ್ರೀಡಾ ಹಬ್ಬಕ್ಕೆ, ಭವಿಷ್ಯದಲ್ಲಿ ಪ್ರಾಯೋಜಕತ್ವದ ನೆರವು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಸಿಎಲ್ ರೂವಾರಿ ಅನಿಲ ಮೆಣಸಿನಕಾಯಿ, ಗದಗ ಹಬ್ಬ ಸಂಗೀತ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮವಾಗಿದೆ. ಜಿಸಿಎಲ್‌ನ ಹಿಂದಿನ ಎರಡು ಆವೃತ್ತಿಗಳು ಯಶಸ್ವಿಯಾಗಿ ನಡೆದಿವೆ. ಕೋವಿಡ್ ಕಾರಣದಿಂದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಜಿಸಿಎಲ್‌ಗೆ ಮತ್ತೆ ಚಾಲನೆ ನೀಡಲಾಗಿದೆ. ಕ್ರಿಕೆಟ್‌ಗೆ ಸೀಮಿತವಾಗಿದ್ದ ಜಿಸಿಎಲ್‌ನ್ನು ಎಲ್ಲ ಮಾದರಿಯ ಆಟಗಳಿಗೆ ವಿಸ್ತರಿಸಲಾಗಿದೆ. ವಾರ್ಡ್ ಹಬ್ಬ, ಹಳ್ಳಿ ಹಬ್ಬದ ಮೂಲಕ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಯಾವುದೇ ರಾಜಕೀಯ ಉದ್ದೇಶ ಇಲ್ಲದೇ ಮನಸ್ಸುಗಳನ್ನು ಬೆಸೆಯುವ ಉದ್ದೇಶದೊಂದಿಗೆ ಇದನ್ನು ಸಂಘಟಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಅಡೆ-ತಡೆಗಳು ಬಂದಿದ್ದವು. ಈ ಸಲ ಅಂಥ ಅಡೆತಡೆಗಳಿಗೆ ಅವಕಾಶ ಇಲ್ಲದಂತೆ ಗದಗ ಹಬ್ಬದ ಆಟೋಟಗಳನ್ನು ಸಂಘಟಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಾಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ, ಜಗನ್ನಾಥಸಾ ಭಾಂಡಗೆ, ಮಹೇಶ ದಾಸರ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಮುಖಂಡರಾದ ಉಮೇಶಗೌಡ ಪಾಟೀಲ, ರವಿ ದಂಡಿನ, ಮಾಧವ ಗಣಾಚಾರಿ, ಎಂ.ಎ. ಹಿರೇಮಠ, ವಿಜಯಲಕ್ಷ್ಮಿ ಮಾನ್ವಿ, ವಿಜಯಲಕ್ಷ್ಮಿ ದುಂದೂರ, ಸ್ವಾತಿ ಅಕ್ಕಿ, ಚನ್ನಮ್ಮ ಹುಳಕಣ್ಣವರ, ಕಮಲಾಕ್ಷಿ ಬಳ್ಳಿಶೆಟ್ಟರ್, ಚಿತ್ರಸಾಹಿತಿ ಹೃದಯಶಿವ, ಪ್ರಶಾಂತ ನಾಯ್ಕರ್ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು.

ಭರ್ಜರಿ ಮೆರವಣಿಗೆ

ಜಿಸಿಎಲ್ 2022ರ ಮೂರನೇ ಆವೃತ್ತಿಯ ಗದಗ ಹಬ್ಬದ ಅಂಗವಾಗಿ ನಡೆದ ವಾರ್ಡ್ ಹಬ್ಬಗಳ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಭರ್ಜರಿ ಮೆರವಣಿಗೆ ಶ್ರಾವಣ ಮಾಸದ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿತು.

ಶನಿವಾರ ಬೆಟಗೇರಿಯ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನಪದ ಕಲಾ ತಂಡಗಳು, 501 ಪೂರ್ಣಕುಂಭ ಹೊತ್ತ ಮಹಿಳೆಯರು ಜಾನಪದ ಲೋಕವನ್ನೆ ಸೃಷ್ಟಿಸಿದ್ದರು. ಹೆಜ್ಜೆ ಮೇಳ, ದೊಡ್ಡ ಮುಖವಾಡದ ಗೊಂಬೆಗಳು, ಹೊಸಗರಡಿ ದೊಡ್ಡಾಟ ಮೇಳ, ಪೌರಾಣಿಕ ಪಾತ್ರಗಳ ವೇಷಧಾರಿಗಳು, ಡೊಳ್ಳು ಕುಣಿತ ತಂಡಗಳು ಹೀಗೆ ಹತ್ತಾರು ಬಗೆಯ ಜನಪದ ಕಲಾವಿದರು ಮೆರವಣಿಗೆಯುದ್ದಕ್ಕೂ ಕಲಾ ಪ್ರದರ್ಶನ ನೀಡಿ ಜನಮನ ರಂಜಿಸಿದರು.

ಸಾರೂಟದಲ್ಲಿ ಪಗಡೆ ಆಟಗಾರರು-ಗೌರವ ಅರ್ಪಣೆ

ಪೌರಾಣಿಕ ಹಿನ್ನೆಲೆಯ ದೇಶಿ ಕ್ರೀಡೆ ಪಗಡೆ ಆಟದ ಮೂಲಕ ವಾರ್ಡ್ ಹಬ್ಬ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಅಲಂಕೃತ ಸಾರೂಟದಲ್ಲಿ ಹಿರಿಯ ಪಗಡೆ ಆಟಗಾರರನ್ನು ಕೂಡಿಸಿಕೊಂಡು, ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆದ ರಂಗಪ್ಪಜ್ಜನ ಮಠದ ಆವರಣ ಮುಖ್ಯ ವೇದಿಕೆಗೆ ಕರೆತರಲಾಯಿತು.

ಬೆಟಗೇರಿ ವೀರಭದ್ರೇಶ್ವರ ದೇವಸ್ಥಾನದಿಂದ ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆವರೆಗೂ ರಸ್ತೆಯ ಎರಡೂ ಬದಿಯಲ್ಲಿ ಸ್ವಾಗತ ಕೋರುವ ಫಲಕಗಳು, ತಳಿರು-ತೋರಣಗಳಿಂದ ಅಲಂಕರಿಸಿದ್ದ ಸ್ವಾಗತ ಕಮಾನುಗಳು, ಹಳ್ಳಿಯ ಸೊಗಡನ್ನು ನೆನಪಿಸುವ ಎತ್ತಿನ ಗಾಡಿಯ ಅಲಂಕೃತ ಗಾಲಿಗಳು ಗದಗ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು.

ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಹಾಗೂ ಬಿಜೆಪಿ ಕಾರ್ಯಕರ್ತರು, ಕಲಾವಿದರು, ಅಭಿಮಾನಿಗಳು, ಮಹಿಳೆಯರು ಭಾಗವಹಿಸಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!