ವಿಜಯಸಾಕ್ಷಿ ಸುದ್ದಿ, ನರಗುಂದ
ಕರಾಳ ಅಮಾವಾಸ್ಯೆ ತನ್ನ ಪ್ರಭಾವ ತೋರಿಸಿದೆ. ಜಿಲ್ಲೆಯ ನರಗುಂದ ತಾಲೂಕು ವ್ಯಾಪ್ತಿಯ ಭೈರನಹಟ್ಟಿ ಗ್ರಾಮದ ಹೊರ ವಲಯದಲ್ಲಿ ಬುಧವಾರ ಕಾರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವಿಗೀಡಾಗಿದ್ದು, ಓರ್ವ ಮಹಿಳೆ ಗಂಭೀರ ಗಾಯಗೊಂಡು ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಬಗ್ಗೆ ವರದಿಯಾಗಿದೆ.
ಈ ರಸ್ತೆ ಅಪಘಾತದಲ್ಲಿ ಕಾರ್ ಮತ್ತು ಬೈಕ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಬೈಕ್ ಹುಬ್ಬಳ್ಳಿಯಿಂದ ಕೊಣ್ಣೂರ ಕಡೆಗೆ ಹಾಗೂ ಕಾರು ಬಾಗಲಕೋಟೆ ಕಡೆಯಿಂದ ಹುಬ್ಬಳ್ಳಿಗೆ ಹೊರಟಿತ್ತು ಎನ್ನಲಾಗಿದ್ದು, ಕಾರಿನಲ್ಲಿದ್ದವರು ಅಪಘಾತ ಸಂಭವಿಸುತ್ತಿದ್ದಂತೆಯೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಭಾರೀ ಗಾಯಗೊಂಡು ಒದ್ದಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಕೂಡಲೇ ಅಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ವ್ಯಕ್ತಿ ಹಾಗೂ ಗಾಯಾಳುಗಳ ಹೆಸರು ತಿಳಿದು ಬಂದಿಲ್ಲ.
ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದವರು ಹೊತ್ತಿ ಉರಿಯುತ್ತಿದ್ದ ಬೈಕ್ ಮತ್ತು ಕಾರುಗಳ ಬೆಂಕಿಯನ್ನಾರಿಸುವಲ್ಲಿ ಶ್ರಮಿಸಿದರು. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.