ಛಳಿಯೆಂದು ಬೆಚ್ಚಗೆ ಹೊದ್ದು ಮಲಗಿದ್ದೀರಾ? ಇಲ್ಲೊಮ್ಮೆ ನೋಡಿ!
ವಿಜಯಸಾಕ್ಷಿ ಸುದ್ದಿ, ಗದಗ
ಚುಮು ಚುಮು ಛಳಿ ಎಲ್ಲರನ್ನೂ ಥರಗೆಟ್ಟಿಸುತ್ತಿದೆ. ಸೂರ್ಯ ನೆತ್ತಿಯ ಮೇಲೆ ಬಂದರೂ ಮೈಮೇಲಿರುವ ಬೆಚ್ಚನೆಯ ಸ್ವೆಟರ್, ತಲೆಗೆ ಸಿಕ್ಕಿಸಿದ ಟೋಪಿ, ಸುತ್ತಿದ ಟವೆಲ್ಲನ್ನು ತೆಗೆದಿಡಬೇಕೆನಿಸುತ್ತಿಲ್ಲ. ಆದರೆ, ಇಂಥ ಛಳಿಯಲ್ಲಿಯೂ ಬಡವರ ಪಾಲಿನ ಸಂಜೀವಿನಿಯೆಂದು ಕರೆಸಿಕೊಳ್ಳುವ ಗದುಗಿನ ಜಿಮ್ಸ್ ಆಸ್ಪತ್ರೆಯಲ್ಲಿಯ ಅವ್ಯವಸ್ಥೆಯ ಮುಂದುವರಿದ ಭಾಗವಾಗಿ, ಬಾಣಂತಿಯರಿಗೆ ಸ್ನಾನಕ್ಕೆ ಬಿಸಿನೀರಿನ ಕೊರತೆಯುಂಟಾಗಿದ್ದು, ಸ್ನಾನದ ಬಿಸಿ ನೀರಿಗಾಗಿ ಅವರ ಸಂಬಂಧಿಕರು ನಿತ್ಯ ನೀರಿನ ಬಕೆಟ್, ಬಾಟಲಿ ಹಿಡಿದು ಅಲ್ಲಿಲ್ಲಿ ಸುತ್ತಾಡಿ, ಕಾಡಿ-ಬೇಡಿ ಬಿಸಿನೀರು ಸಂಗ್ರಹಿಸಿ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಡವರು ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಾಗಿ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ, ಇಲ್ಲಿನ ಅವ್ಯವಸ್ಥೆಗೆ ಬಾಣಂತಿಯರು ಅಕ್ಷರಶಃ ಕುಗ್ಗಿಹೋಗುವಂತಾಗಿದೆ. ಹೆರಿಗೆಯಾಗಿ ನವಜಾತ ಶಿಶುವಿನೊಂದಿಗೆ ಆರೈಕೆಯಲ್ಲಿರುವ ಬಾಣಂತಿಯರಿಗೆ ಬಿಸಿ ನೀರು ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬಾಣಂತಿಯರ ಸಂಬಂಧಿಕರು ನೀರಿನ ಬಾಟಲ್ ಹಾಗೂ ಬಕೆಟ್ ಹಿಡಿದುಕೊಂಡು, ಬಿಸಿ ನೀರಿಗಾಗಿ ನಿತ್ಯ ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ.

ಇದೆಂಥಾ ಅವ್ಯವಸ್ಥೆ ಎಂದು ಜನರು ಕಿಡಿ ಕಾರುವಂತಾಗಿದೆ. ಸರ್ಕಾರ ಬಡ ಜನರಿಗೆ ಒಳ್ಳೆಯ ಚಿಕಿತ್ಸೆ ಸಿಗಲಿ ಎಂಬ ಆಶಯದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದೆ. ಆದ್ರೆ, ಜಿಮ್ಸ್ ಆಡಳಿತ ಮಾತ್ರ ರೋಗಿಗಳಿಗೆ ಕನಿಷ್ಠ ಮೂಲ ಸೌಕರ್ಯವನ್ನೂ ನೀಡುತ್ತಿಲ್ಲ. ಬೆಳ್ಳಂಬೆಳ್ಳಗ್ಗೆ ನೀರಿನ ಬಾಟಲ್ ಹಾಗೂ ಬಕೆಟ್ ಹಿಡಿದುಕೊಂಡು ಬಾಣಂತಿಯರ ಸಂಬಂಧಿಕರು ಹೋಟೆಲ್‌ಗಳಿಗೆ ಅಲೆದಾಡುತ್ತ, `ಅಣ್ಣಾ, ಆಸ್ಪತ್ರೆಯಲ್ಲಿ ಬಾಣಂತಿಯಿದ್ದಾಳೆ. ತಣ್ಣೀರು ಸ್ನಾನ ಆಗವಲ್ದು. ತ್ರಾಸ ಆಕ್ಯದ. ಸ್ವಲ್ಪ ಬಿಸಿನೀರು ಕೊಡ್ರೀ ಅಣ್ಣಾ, ಹ್ಯಾಂಗೂ ಮನೀ ಮಖ ಕಾಣತೇವಿ…’ ಎಂಬರ್ಥದ ಮಾತುಗಳು ಕೇಳಿಬರುತ್ತಿವೆ.
ಒಂದು ಬಾಟಲ್ ನೀರಿಗೆ 20 ರೂ. ಹಣ ನೀಡಬೇಕು. ಒಂದು ಬಕೆಟ್‌ಗೆ 50-60 ರೂ. ಹಣ ನೀಡಬೇಕು. ಆ ಬಾಟಲ್ ಹಾಗೂ ಬಕೆಟ್ ನೀರಿನಲ್ಲಿಯೇ ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೈಕೆ ಮಾಡಬೇಕಾದ ಸಂಕಟ ಎದುರಾಗಿದ್ದು, ಬಡವರು ಸರ್ಕಾರಿ ಆಸ್ಪತ್ರೆ ಎಂದು ಬಂದರೆ, ಉಳಿದ ಖರ್ಚುಗಳೆಲ್ಲಾ ಇಲ್ಲಿ ನೀರಿಗಾಗಿ ಮಾಡುತ್ತಿರುವ ಖರ್ಚಿಗೇ ಸರಿಹೋಗುವಂತಿದೆ.
ಕಳೆದ ಒಂದು ತಿಂಗಳಿಂದ ಬಾಣಂತಿಯ ಸಂಬಂಧಿಕರು, ಹಣ ಕೊಟ್ಟು ನೀರು ತೆಗೆದುಕೊಂಡು ಬಂದು ಆರೈಕೆ ಮಾಡುತ್ತಿದ್ದಾರೆ. ಇಷ್ಟೊಂದು ನೀರಿನ ಸಮಸ್ಯೆಯಿದ್ದರೂ ಕೂಡ ಜಿಮ್ಸ್ ಆಸ್ಪತ್ರೆಯ ನಿರ್ದೇಶಕರು ಈ ಕಡೆ ತಿರುಗೆ ನೋಡಿಲ್ಲ ಅನ್ನೂ ಆರೋಪ ಕೇಳಿ ಬಂದಿದೆ. ಕನಿಷ್ಠ ಚಳಿಗಾಲದಲ್ಲಿಯಾದರೂ ರೋಗಿಗಳಿಗೆ, ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಮಾಡುವಂತೆ ಚಿಕಿತ್ಸೆಗಾಗಿ ಬಂದಿದ್ದ ಬಾಣಂತಿಯರ ಸಂಬಂಧಿಕರಾದ ಜನ್ನತ್ ಬೀ, ಮಾಲತೇಶ ಮುಂತಾದವರು ಒತ್ತಾಯಿಸಿದ್ದಾರೆ.
ಜಿಮ್ಸ್ ಆಸ್ಪತ್ರೆಗೆ ಗದಗ ಜಿಲ್ಲೆ ಸೇರಿದಂತೆ, ಪಕ್ಕದ ಹಾವೇರಿ, ಕೊಪ್ಪಳ, ಹಾಗೂ ಬಳ್ಳಾರಿ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಹೆರಿಗೆಗೆಂದು ಆಸ್ಪತ್ರೆ ಬರುತ್ತಾರೆ. ನುರಿತ ವೈದ್ಯರಿದ್ದರೂ ಮೂಲ ಸೌಕರ್ಯದ ಕೊರತೆ ನೀಗುತ್ತಿಲ್ಲ. ಬಿಸಿ ನೀರಿನ ಜೊತೆಗೆ ಕುಡಿಯುವ ನೀರು ಹಾಗೂ ಆಸ್ಪತ್ರೆಯಲ್ಲಿ ಬಳಕೆ ಮಾಡುವ ನೀರಿಗೂ ಸಾಕಷ್ಟು ಸಮಸ್ಯೆ ಉಂಟಾಗಿದೆ. ಅದರಲ್ಲೂ ಬಾಣಂತಿಯರು ಹಾಗೂ ನವಜಾತ ಶಿಶುಗಳಿಗೆ ಬಿಸಿ ನೀರು ಬಹಳ ಅಗತ್ಯ. ಈ ಆಸ್ಪತ್ರೆಯಲ್ಲಿ ಬಿಸಿ ನೀರಿಗಾಗಿ ಯಾವುದೇ ವ್ಯವಸ್ಥೆಯಿಲ್ಲವೆಂದರೆ, ಎಂತಹ ವಿಪರ್ಯಾಸ ಅಲ್ಲವಾ?!
ಮೂರು ಬಿಸಿ ನೀರಿನ ಗೀಜರ್‌ಗಳಿದ್ದು, ಎರಡು ಕೆಟ್ಟಿವೆ, ಒಂದು ಸುಸ್ಥಿತಿಯಲ್ಲಿದೆ. ಇನ್ನು ನಾಲ್ಕೈದು ದಿನದಲ್ಲಿ ಬಿಸಿ ನೀರಿನ ಸಮಸ್ಯೆಯಾಗದೆಯಂತೆ ಕ್ರಮ ಕೈಗೊಳ್ಳಲಾಗುವುದು.
-ಡಾ. ಬಸವರಾಜ್ ಬೊಮ್ಮನಹಳ್ಳಿ, ಜಿಮ್ಸ್ ನಿರ್ದೇಶಕ
ಸರ್ಕಾರ ಆಸ್ಪತ್ರೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಅನುದಾನ ಒದಗಿಸುತ್ತದೆ. ಆದರೆ, ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಮೂಲ ಸೌಕರ್ಯಗಳು ಕೂಡಾ ಸಿಗುತ್ತಿಲ್ಲ. ಇಲ್ಲಿನ ಆಡಳಿತ ಮಂಡಳಿಯ ಬೇಜವಾಬ್ದಾರಿತನದಿಂದ ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಆರೋಗ್ಯ ಸಚಿವರು ಜಿಮ್ಸ್ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.