ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ/ರೋಣ
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ವಿಧಿವಶರಾಗಿದ್ದಾರೆ. ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಕೆಪಿಸಿಸಿ ಆಯೋಜಿಸಿದ್ದ ಟಿಕೆಟ್ ಆಕಾಂಕ್ಷೆಗಳ ಸಭೆಯಲ್ಲಿ ಈ ದುರ್ಘಟನೆ ನಡೆದಿದೆ. ಸಭೆ ಆರಂಭವಾಗುತ್ತಿದ್ದಂತೆಯೇ ಶ್ರೀಶೈಲಪ್ಪ ಕುಸಿದು ಬಿದ್ದಿದ್ದಾರೆ.
1994ರಲ್ಲಿ ಗದಗ ಜಿಲ್ಲೆಯ ರೋಣ ವಿಧಾನ ಸಭಾ ಕ್ಷೇತ್ರದಿಂದ ಜನತಾದಳದಿಂದ ಗೆದ್ದಿದ್ದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ಸೂಡಿಯ ಮಂಡಲ ಪಂಚಾಯತಿಯಿಂದ ರಾಜಕೀಯ ಆರಂಭಿಸಿದ್ದ ಶ್ರೀಶೈಲಪ್ಪ ಬಿದರೂರು, (ಟಿಡಿಬಿ) ತಾಲೂಕು ಡೆವೆಲಪ್ಮೆಂಟ್ ಬೋರ್ಡ್ ಗೂ ಆಯ್ಕೆಯಾಗಿದ್ದರು. ಮೂಲತಃ ಜನತಾ ಪರಿವಾರದಿಂದ ಬಂದವರಾಗಿದ್ದರು. ಅವರೊಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು.
2008 ರಲ್ಲಿ ಗದಗ ಕ್ಷೇತ್ರದಿಂದ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಇದಕ್ಕೂ ಮೊದಲು ರೋಣ ಕ್ಷೇತ್ರದಿಂದ ಜನತಾದಳದಿಂದ ಗೆದ್ದಿದ್ದರು.
2018ರ ಚುನಾವಣೆಯಲ್ಲಿ ಗದಗ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದ ಶ್ರೀಶೈಲಪ್ಪ ಬಿದರೂರಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿರಲಿಲ್ಲ. ನಂತರದ ಬೆಳವಣಿಗೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಮೊನ್ನೆ ಅಷ್ಟೇ ರೋಣ ಹಾಗೂ ಗದಗ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿ ಗೆ ಅರ್ಜಿ ಸಲ್ಲಿಸಿದ್ದರು. ಇಂದು ನಡೆಯಲಿದ್ದ ಟಿಕೆಟ್ ಆಕಾಂಕ್ಷೆಗಳ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು.
ಸಭೆ ಆರಂಭವಾಗುತ್ತಿದ್ದಂತೆ ಕುಸಿದು ಬಿದ್ದಿದ್ದರು. ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು

ಸುದ್ದಿ ತಿಳಿದ ಕಾಂಗ್ರೆಸ್ ಹಿರಿಯ ನಾಯಕರೂ ಆದ ಶಾಸಕ ಎಚ್ ಕೆ ಪಾಟೀಲ್ ಹಾಗೂ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿನ ಸಭೆ ಮೊಟಕುಗೊಳಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂತಾಪ; ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರ ನಿಧನಕ್ಕೆ ಅನೇಕ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಸಕ ಎಚ್ ಕೆ ಪಾಟೀಲ್,ಸಚಿವ ಸಿ ಸಿ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ ಎಸ್ ಪಾಟೀಲ್, ಬಿ ಆರ್ ಯಾವಗಲ್, ರಾಮಕೃಷ್ಣ ದೊಡ್ಡಮನಿ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಸೇರಿದಂತೆ ಅನೇಕ ಧುರೀಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.