ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಎತ್ತಿನ ಮೈ ತೊಳೆಯಲು ಹೊಲಕ್ಕೆ ಹೋದ ಬಾಲಕ ಆಯತಪ್ಪಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ, ಕುಷ್ಟಗಿ ತಾಲೂಕಿನ ಮೆಣಸಗೇರಾದಲ್ಲಿ ನಡೆದಿದೆ.
ದೇವೇಂದ್ರಪ್ಪ (ಮುತ್ತಪ್ಪ) ಯಲಗುದರಪ್ಪ ದಾಸಬಾಳ (14) ಮೃತ ಬಾಲಕ. ಸೋಮವಾರದ ಹಿನ್ನೆಲೆ ತಮ್ಮ ಜಮೀನಿನ ಕೃಷಿ ಹೊಂಡದಲ್ಲಿ ಎತ್ತಿನ ಮೈ ತೊಳೆಯಲು ಹೋಗಿದ್ದ. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.
ಹೊಲಕ್ಕೆ ಹೋದ ಬಾಲಕ ಮರಳಿ ಮನೆಗೆ ಬಾರದ ಹಿನ್ನೆಲೆ ಮನೆಯವರು ಹುಡುಕಾಟ ನಡೆಸಿದ್ದರು. ಕೃಷಿ ಹೊಂಡದ ಬಳಿ ಎತ್ತು ಮಾತ್ರ ನಿಂತಿತ್ತು. ಅನುಮಾನಗೊಂಡು ಕೃಷಿ ಹೊಂಡದಲ್ಲಿ ಬಾಲಕನ ತಂದೆ ಹುಡುಕಿದಾಗ ಶವ ಪತ್ತೆಯಾಗಿದೆ.
ಬಾಲಕ ದೇವೇಂದ್ರಪ್ಪ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಗನ ಅಕಾಲಿಕ ಮರಣದಿಂದ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಪಾರ್ಥಿವ ಶರೀರವನ್ನು ಕುಟುಂದವರಿಗೆ ಹಸ್ತಾಂತರಿಸಲಾಯಿತು. ಪ್ರಕರಣ ಕುಷ್ಟಗಿ ಠಾಣೆಯಲ್ಲಿ ದಾಖಲಾಗಿದೆ.